ಉದಯವಾಹಿನಿ ತ್ವಚೆಯ ಸೌಂದರ್ಯ ಹಾಗೂ ಕೂದಲಿನ ಸಂಪತ್ತನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸೌಂದರ್ಯ ಉತ್ಪನ್ನಗಳ ಕೊರತೆಯಿಲ್ಲ. ಆದರೆ, ಇವೆಲ್ಲವುಗಳು ಪ್ರತಿಯೊಬ್ಬರಿಗೂ ಸರಿಯಾಗಿ ಹೊಂದುವುದಿಲ್ಲ. ಹೌದು, ಕೆಲವು ಜನರಲ್ಲಿ ಸೌಂದರ್ಯದ ವಸ್ತುಗಳು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ, ಸೌಂದರ್ಯ ತಜ್ಞರು ಮನೆಯಲ್ಲಿ ಲಭಿಸುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಅರಿಶಿನ ಅತ್ಯುತ್ತಮ: ಅರಿಶಿನವು ಮೈಬಣ್ಣವನ್ನು ಹೆಚ್ಚಿಸುವುದರ ಜೊತೆಗೆ ಅನಗತ್ಯ ಕೂದಲನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಮೇಲಿನ ಸುಕ್ಕುಗಳನ್ನು ತಡೆಯುತ್ತದೆ. ಇದಕ್ಕಾಗಿ ಸ್ವಲ್ಪ ಅಕ್ಕಿ ಹಿಟ್ಟನ್ನು ಹಸಿ ಹಾಲು ಹಾಗೂ ಟೊಮೆಟೊ ರಸದೊಂದಿಗೆ ಬೆರೆಸಿ. ಇದಕ್ಕೆ ಸ್ವಲ್ಪ ಅರಿಶಿನವನ್ನು ಕೂಡ ಸೇರಿಸಬೇಕಾಗುತ್ತದೆ. ಈ ಮಿಶ್ರಣವನ್ನು ಹಚ್ಚಿ ಸಂಪೂರ್ಣವಾಗಿ ಒಣಗಿದ ನಂತರ ತೊಳೆದರೆ ಸಾಕಾಗುತ್ತದೆ ಎಂದು ಸೌಂದರ್ಯ ತಜ್ಞರು ತಿಳಿಸುತ್ತಾರೆ.
ತುಳಸಿ ಎಲೆಗಳು ಒಳ್ಳೆಯದು: ತುಳಸಿ ಎಲೆಗಳಲ್ಲಿರುವ ಔಷಧದ ಗುಣಗಳು ಮೊಡವೆಗಳನ್ನು ತಡೆಯುತ್ತದೆ. ತುಳಸಿ ಎಲೆಗಳಲ್ಲಿ ಆ್ಯಂಟಿಮೈಕ್ರೊಬಿಯಲ್ ಹಾಗೂ ಉರಿಯೂತದ ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು, ಚರ್ಮದಲ್ಲಿರುವ ಮೊಡವೆ, ಕಲೆಗಳು ಹಾಗೂ ಇತರ ಚರ್ಮದ ಸೋಂಕುಗಳನ್ನು ಹೋಗಲಾಡಿಸುತ್ತದೆ.
ತುಳಸಿಯು ಚರ್ಮವನ್ನು ಮೃದು ಹಾಗೂ ನಯವಾಗಿಸುತ್ತದೆ. ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಹಾಲು ಸೇರಿಸಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕಾಗುತ್ತದೆ, ಬಳಿಕ ತಣ್ಣಗಿರುವ ನೀರಿನಿಂದ ತೊಳೆಯಿರಿ, ಇದು ಮೊಡವೆಗಳನ್ನು ತಡೆಗಟ್ಟಲು ಹಾಗೂ ಚರ್ಮದ ಆರೈಕೆಗೆ ತುಂಬಾ ಸಹಾಯವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಆಮ್ಲಾ ಬೆಸ್ಟ್: ಆಮ್ಲಾದಲ್ಲಿ ವಿಟಮಿನ್ ‘ಸಿ’ ಹೇರಳವಾಗಿದೆ. ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ವಿಶೇಷವಾಗಿ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಗೆ ತುಂಬಾ ಸಹಾಯಕಾರಿಯಾಗಿದೆ, ಕೂದಲು ಉದುರುವಿಕೆಯನ್ನು ತಗ್ಗಿಸುತ್ತದೆ. ಆಮ್ಲಾ ಕೂದಲನ್ನು ಬಲವಾಗಿ ಮತ್ತು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ. ಎರಡು ಟೀಸ್ಪೂನ್ ಆಮ್ಲಾ ರಸಕ್ಕೆ ಸಮಾನ ಪ್ರಮಾಣದ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಸಂಪೂರ್ಣವಾಗಿ ಒಣಗಲು ಬಿಡಿ. ಅದರ ನಂತರ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಸಾಕು. ಇದರಿಂದ ಒಟ್ಟಾರೆ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಬೇವಿನ ಎಲೆಗಳು ಉತ್ತಮ: ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ, ಬೇವು ಸೌಂದರ್ಯ ಆರೈಕೆಗೂ ತುಂಬಾ ಒಳ್ಳೆಯದು. ಇದು ವಿಶೇಷವಾಗಿ ಮೊಡವೆಗಳ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಚರ್ಮದಿಂದ ಬ್ಯಾಕ್ಟೀರಿಯಾ ಹಾಗೂ ಸೂಕ್ಷ್ಮಜೀವಿಗಳನ್ನು ತೆಗೆದುಹಾಕುತ್ತದೆ ಹಾಗೂ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಕೆಲವು ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ. ನೀವು ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಸ್ವಚ್ಛಗೊಳಿಸಿದರೆ, ಮೊಡವೆಗಳ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
