ಉದಯವಾಹಿನಿ, ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಮಿತ್ ಶಾ ಅವರ ಸಂಪರ್ಕದಲ್ಲಿದ್ದಾರೆ ಅನ್ನೋದು ಸತ್ಯಕ್ಕೆ ದೂರದ ಮಾತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ 2 ವರ್ಷ ಪೂರೈಸಿದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನ ದೆಹಲಿಯಲ್ಲಿ ಭೇಟಿಯಾದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಡಿಕೆ ಶಿವಕುಮಾರ್ ಅಮಿತ್ ಶಾ ಸಂಪರ್ಕದಲ್ಲಿರುವುದು ಸತ್ಯಕ್ಕೆ ದೂರದ ಮಾತು ಅಂತ ಸ್ಪಷ್ಟನೆ ನೀಡಿದರು. ಅಲ್ಲದೇ ರಾಜ್ಯಾಧ್ಯಕ್ಷರ ಬದಲಾವಣೆ ಸದ್ಯಕ್ಕೇನಿಲ್ಲ, ಎಲ್ಲರನ್ನೂ ಭೇಟಿಯಾಗುತ್ತಿದ್ದೇನೆ. ಏನೇ ಸಮಸ್ಯೆಯಿದ್ದರೂ ಜೀರ್ಣಿಸಿಕೊಂಡು ಕಾರ್ಯಕರ್ತರ ಮಧ್ಯೆ ದುಡಿಯುತ್ತೇನೆ. ಸಣ್ಣಪುಟ್ಟ ಸಮಸ್ಯೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಯಾವ ವರ್ಗದ ಜನಕ್ಕೂ ನ್ಯಾಯ ಸಿಕ್ಕಿಲ್ಲ: ಮುಂದುವರಿದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದೆ. ಪ್ರಣಾಳಿಕೆಯಲ್ಲಿನ ಎಲ್ಲ ಘೋಷಣೆ ಅನುಷ್ಠಾನಗೊಳಿಸಿದ್ದೇವೆ. ನಮ್ಮದೊಂದು ಮಾದರಿ ಸರ್ಕಾರ ಅಂತ ಹೇಳಿಕೊಳ್ತಿದ್ದಾರೆ. ಆದ್ರೆ ಎರಡೂವರೆ ವರ್ಷ ಪೂರೈಸಿರೋದೇ ದೊಡ್ಡ ಸಾಧನೆ. ಯಾವ ವರ್ಗದ ಜನರಿಗೂ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ತಿವಿದರು.
