ಉದಯವಾಹಿನಿ : ನಾವು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಸೇವಿಸುವ ಆಹಾರಗಳು ನಮ್ಮ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಮೊದಲನೆಯ ಆಹಾರವಾಗಿ ಏನನ್ನು ತಿನ್ನುತ್ತೇವೆ ಅದು ನಮ್ಮ ಇಡೀ ದಿನದ ಕಾರ್ಯ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ರೋಗ್ಯಯುತ ಆಹಾರ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.ಇದಕ್ಕೆ ಪಾನೀಯವೂ ಹೊರತಾಗಿಲ್ಲ. ಅಂತಹ ಆರೋಗ್ಯಕಾರಿ ಪಾನೀಯಗಳಲ್ಲಿ ಏಲಕ್ಕಿ ನೀರು ಒಂದಾಗಿದ್ದು, ಇದು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು, ಏಲಕ್ಕಿ ದೇಹವನ್ನು ಆರೋಗ್ಯವಾಗಿಡಲು ಸಹಕಾರಿ. ಏಲಕ್ಕಿಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.ಹಿಂದಿನ ಕಾಲದಲ್ಲಿ ಏಲಕ್ಕಿ ಬಳಕೆ ಹೆಚ್ಚಿತ್ತು. ಜನರು ಯಾವುದೇ ಅನಾರೋಗ್ಯ ಕಾಡಿದರೂ ಏಲಕ್ಕಿ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಏಲಕ್ಕಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಜತೆಗೆ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ
ಏಲಕ್ಕಿ ಪೋಷಕಾಂಶಗಳ ನಿಧಿಯಾಗಿದ್ದು, ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಏಲಕ್ಕಿಯಲ್ಲಿ ಕಂಡು ಬರುತ್ತವೆ. ಏಲಕ್ಕಿ ಫೈಬರ್‌ನ ಒಳ್ಳೆಯ ಮೂಲ. ಏಲಕ್ಕಿಯಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕವೂ ಇದೆ. ಏಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿದೆ. ಏಲಕ್ಕಿ ನೀರಿನ ಸೇವನೆಯಿಂದ ಪ್ರಯೋಜನ ತಿಳಿಯುವ ಮೊದಲು ಏಲಕ್ಕಿ ನೀರನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.
ಏಲಕ್ಕಿ ನೀರು ತಯಾರಿಸುವ ವಿಧಾನ: ನಾಲ್ಕರಿಂದ ಐದು ಏಲಕ್ಕಿಯ ಸಿಪ್ಪೆ ತೆಗೆದು, ಬೀಜವನ್ನು ಒಂದು ಲೀಟರ್ ನೀರಿನಲ್ಲಿ ನೆನೆ ಹಾಕಿ. ರಾತ್ರಿ ಪೂರ್ತಿ ಏಲಕ್ಕಿ ನೀರಿನಲ್ಲಿ ನೆನೆಯಬೇಕು. ಮರುದಿನ ಬೆಳಿಗ್ಗೆ ಈ ನೀರನ್ನು ಕುದಿಸಬೇಕು. ನಂತರ ಫಿಲ್ಟರ್ ಮಾಡಬೇಕು. ಈ ನೀರನ್ನು ಪಾತ್ರೆಯಲ್ಲಿ ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತ್ರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಏಲಕ್ಕಿ ನೀರನ್ನು ಕುಡಿಯಿರಿ. ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿಯಲು ಸಾಧ್ಯವಿಲ್ಲ ಎನ್ನುವವರು ದಿನದಲ್ಲಿ ಮೂರ್ನಾಲ್ಕು ಬಾರಿ ನೀರನ್ನು ಕುಡಿಯಬೇಕು. ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಏಲಕ್ಕಿ ನೀರನ್ನು ಸೇವಿಸಬಹುದು. ಅನೇಕ ಅಧ್ಯಯನಗಳಿಂದಲೂ ಇದು ಸಾಬೀತಾಗಿದೆ. ಏಲಕ್ಕಿಯಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಫೈಬರ್ ಮತ್ತು ಇತರ ಪ್ರಮುಖ ಪೋಷಕಾಂಶಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
