ಉದಯವಾಹಿನಿ, ಬೆಂಗಳೂರು:  ವರ್ಗಾವಣೆ ದಂಧೆಯ ಕುರಿತಾಗಿ ನಾನು ಮಾಡಿದ ಆರೋಪದಲ್ಲಿ ಯಾವುದೇ ಜಾತಿ ಪ್ರಶ್ನೆ ಉದ್ಭವಿಸುವುದಿಲ್ಲ. ಬದಲಾಗಿ ವಾಸ್ತವಾಂಶವನ್ನು ತೆರೆದಿಟ್ಟಿದ್ದೇನೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದರು. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಭ್ರಷ್ಟಾಚಾರದ ತಡೆಗೆ ಸದನದ ಬೆಂಬಲ ಕೇಳಿದೆ ಸರ್ಕಾರ. ಸರ್ಕಾರಕ್ಕೆ ಈ ಭ್ರಷ್ಟಾಚಾರ ನಿಲ್ಲಿಸುವ ಎದೆಗಾರಿಕೆ ಇದ್ರೆ ನಿಲ್ಲಿಸಿ ಎಂದು ಒಂದು ಉದಾಹರಣೆ ಹೇಳಿದ್ದೇನೆ ಅಷ್ಟೇ. ಆ ಕಾರಣಕ್ಕಾಗಿ ನಾನು ಸಚಿವರ ಹೆಸರು ಮತ್ತು ಇಲಾಖೆ ಹೆಸರನ್ನು ಹೇಳಲಿಲ್ಲ ಎಂದರು. ಈ ಎಲ್ಲಾ ಆರೋಪಗಳನ್ನು ನಾನು ತಯಾರು ಮಾಡಿಲ್ಲ. ಬದಲಾಗಿ ವಾಸ್ತವಾಂಶವನ್ನು ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸಬೇಕು ಎಂಬ ಧೈರ್ಯ ಇದ್ದರೆ ಕ್ರಮ ವಹಿಸಲಿ. ಈ ದರಪಟ್ಟಿ ಅವರೇ ಕೊಟ್ಟಿದ್ದ ಜಾಹೀರಾತಿನ ಮುಂದುವರೆದ ಭಾಗ ಇರಬಹುದು ಎಂದರು. ಈ ದರಪಟ್ಟಿ ಈಗ ಇವರ ಅವಧಿಯಲ್ಲೇ ಮಾಡಿರುವುದು ಅಂತಿದ್ದಾರೆ.

ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಸೋರಿಕೆ ಆಗಿದೆ ಎಂದು ಆರೋಪಿಸಿದರು. ನಾನು ಒಕ್ಕಲಿಗ ಸಮಾಜದಲ್ಲಿ ಯಾರನ್ನೂ ಬೆಳೆಯಲು ಅಡ್ಡಿ ಮಾಡಿಲ್ಲ. ಭ್ರಷ್ಟಾಚಾರದ ದಾಖಲೆ ಇಟ್ಟಿದ್ದಕ್ಕೆ ಜಾತಿ ಬಣ್ಣ ಕಟ್ಟಿದ್ದಾರೆ ಎಂದು ಚೆಲುವರಾಯಸ್ವಾಮಿ ಗೆ ಎಚ್ಡಿಕೆ ಟಾಂಗ್ ನೀಡಿದರು. ನಾನು ಮಾಡಿರುವ ಆರೋಪದಲ್ಲಿ ಜಾತಿ ಪ್ರಶ್ನೆ ಉದ್ಭವಿಸುವುದಿಲ್ಲ. ಅಧಿಕಾರಿಗಳನ್ನು ಹಣ ಪಡೆದು ವರ್ಗ ಮಾಡಿದ್ರೆ ಆ ಅಧಿಕಾರಿಗಳು ಜನರು ಕೆಲಸ ಮಾಡ್ತಾರಾ..? ಜಾತಿಯ ಹೆಸರಲ್ಲಿ ಅವರು ರಕ್ಷಣೆ ಪಡೆಯುತ್ತಿದ್ದಾರೆ. ನನಗೆ ಯಾರ ಮೇಲೂ ದ್ವೇಷ, ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು. ಅವರು ನಮ್ಮ ಪಕ್ಷ ಬಿಟ್ಟು ಹೋದ ನಂತರ ಅವರ ಬಗ್ಗೆ ಚರ್ಚೆನೇ ಮಾಡಿಲ್ಲ. ಸದನದಲ್ಲೂ ಅವರ ಹೆಸರು ಹೇಳಲಿಲ್ಲ ಎಂದು ಸಚಿವ ಚೆಲುವರಾಯ ಸ್ವಾಮಿಗೆ ಎಚ್‌ ಡಿ ಕುಮಾರಸ್ವಾಮಿ ಪರೋಕ್ಷ ಟಾಂಗ್ ನೀಡಿದರು.

Leave a Reply

Your email address will not be published. Required fields are marked *

error: Content is protected !!