ಉದಯವಾಹಿನಿ,ಬೆಂಗಳೂರು: ರಾಜ್ ಬಿ.ಶೆಟ್ಟಿ ಯಾವುದೇ ಪಾತ್ರದ ಪರಕಾಯ ಪ್ರವೇಶ ಮಾಡುವ ಸಾಮರ್ಥ್ಯವುಳ್ಳ ನಟ. ‘ಗರುಡ ಗಮನ ವೃಷಭ ವಾಹನ‘ ಸಿನಿಮಾದಲ್ಲಿ ‘ಶಿವ’ನಾಗಿ ತೆರೆಯ ಮೇಲೆ ತನ್ನೊಳಗಿನ ನಟ ಹಾಗೂ ನಿರ್ದೇಶಕನ ಸಾಮರ್ಥ್ಯವನ್ನು ತೋರಿದ್ದ ರಾಜ್, ‘ಟೋಬಿ‘ ಸಿನಿಮಾಗಾಗಿ ಮೂಗು ಚುಚ್ಚಿಸಿಕೊಂಡಿದ್ದರು. ಇದೀಗ ಆ ಕ್ಷಣದ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಾಜ್ ಹಂಚಿಕೊಂಡಿದ್ದಾರೆ. ‘ಟೋಬಿ-ಮಾರಿ ಮಾರಿ, ಮಾರಿಗೆ ದಾರಿ’ ಎಂಬ ಶೀರ್ಷಿಕೆ ಹೊತ್ತ ಈ ಸಿನಿಮಾ ಆಗಸ್ಟ್ 25ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಸಿನಿಮಾ ಪ್ರಚಾರ ಆರಂಭಿಸಿರುವ ಚಿತ್ರತಂಡ ಪ್ರಚಾರದ ಭಾಗವಾಗಿ ಈ ವಿಡಿಯೊ ತುಣುಕನ್ನು ಬಿಡುಗಡೆ ಮಾಡಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಸನ್ನಿವೇಶದಲ್ಲಿ ರಾಜ್ ಅವರ ‘ಟೋಬಿ’ ಪಾತ್ರ ಮೂಗುತಿ ಧರಿಸುತ್ತದೆ. ದೃಶ್ಯವು ನೈಜವಾಗಿ ಬರಬೇಕು ಎನ್ನುವ ಉದ್ದೇಶದಿಂದ ರಾಜ್ ಗನ್ ಮೂಲಕ ಮೂಗು ಚುಚ್ಚಿಸಿಕೊಂಡಿದ್ದಾರೆ.
‘ಸಾಮಾನ್ಯವಾಗಿ ಮೂಗು ಚುಚ್ಚಿಸಿಕೊಂಡ ಬಳಿಕ ಸಣ್ಣ ಮೂಗುತಿಯನ್ನು ಹಾಕುತ್ತಾರೆ. ಆದರೆ ರಾಜ್ ಅವರು ಧರಿಸಿದ ಮೂಗುತಿ ಭಾರವಾಗಿತ್ತು. ಇದರಿಂದ ಗಾಯ ವಾಸಿಯಾಗುತ್ತಿರಲಿಲ್ಲ. ಈ ನೋವಿಗೆ ರಾಜ್ ಊಟವನ್ನೂ ಮಾಡುತ್ತಿರಲಿಲ್ಲ. ಪ್ರತಿ ಬಾರಿ ರಿಂಗ್ ತೆಗೆದ ತಕ್ಷಣ ತುಳಸಿ ಕಡ್ಡಿಯನ್ನು ಇಡುತ್ತಿದ್ದೆವು. ಒಮ್ಮೆ ಆ ಮೂಗುತಿ ಕಿತ್ತು ಬಂದಾಗ ನೋವು ತಾಳಲಾರದೆ ರಾಜ್ ಕಣ್ಣೀರು ಹಾಕಿದ್ದರು. ನೋವು ಕಮ್ಮಿ ಆಗಲು ಇಂಜೆಕ್ಷನ್ ಕೂಡಾ ತೆಗೆದುಕೊಳ್ಳುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತದೆ ಚಿತ್ರತಂಡ. ‘ಸಿನಿಮಾಗಾಗಿ ನಾವು ಬೆವರು, ರಕ್ತ ಸುರಿಸಿದ್ದೇವೆ ಎಂದಾಗ ಆ ಮಾತುಗಳೆಲ್ಲವೂ ಸತ್ಯ. ಇವೆಲ್ಲವೂ ‘ಟೋಬಿ’ಗಾಗಿ’ ಎಂದಿದ್ದಾರೆ ರಾಜ್. ‘ಟೋಬಿ’ ಚಿತ್ರಕ್ಕೆ ಬಾಸಿಲ್ ಅಲ್ಚಲಕ್ಕಲ್ ಆಯಕ್ಷನ್ ಕಟ್ ಹೇಳಿದ್ದಾರೆ. ಬಾಸಿಲ್ ಈ ಹಿಂದೆ ರಾಜ್ ಅವರ ಸಿನಿಮಾಗಳಲ್ಲೇ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ‘ಲೈಟರ್ ಬುದ್ಧ ಫಿಲ್ಮ್ಸ್‌ನಡಿ ನಿರ್ಮಾಣವಾದ ರಾಜ್ ಬಿ.ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ರವಿ ರೈ ಕಳಸ ಅವರೇ ‘ಟೋಬಿ’ ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ರಾಜ್ಯದಾದ್ಯಂತ ವಿತರಣೆ ಮಾಡಲಿದೆ. ಚಿತ್ರಕ್ಕೆ ಮಿದುನ್ ಮುಕುಂದನ್ ಸಂಗೀತ ನಿರ್ದೇಶನವಿದ್ದು, ಪ್ರವೀಣ್ ಶ್ರೀಯನ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ನಟಿಯರಾದ ಚೈತ್ರ ಜೆ.ಆಚಾರ್ ಹಾಗೂ ಸಂಯುಕ್ತ ಹೊರನಾಡು ನಟಿಸಿದ್ದಾರೆ.
