ಉದಯವಾಹಿನಿ, ಧರ್ಮಶಾಲಾ: ದುಬೈ ಏರ್ ಶೋ ವೇಳೆ ತೇಜಸ್ ಯುದ್ಧ ವಿಮಾನ ಪತನಗೊಂಡು ಹುತಾತ್ಮರಾಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪೈಲಟ್ ನಮಾಂಶ್ ಸಯಾಲ್ ಅವರ ಅಂತ್ಯಸಂಸ್ಕಾರ ಇಂದು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ನಡೆಯಿತು. ನಮಾಂಶ್ ಅವರ ಪತ್ನಿ ಅಫ್ಸಾನ ಅವರು ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದು ಸಮವಸ್ತ್ರ ಧರಿಸಿ ತಮ್ಮ ಪತಿಗೆ ಅಂತಿಮ ನಮನ ಸಲ್ಲಿಸಿದರು. ಏಳು ವರ್ಷದ ಪುತ್ರಿಯ ಕೈ ಹಿಡಿದುಕೊಂಡು ಕಣ್ಣೀರು ಹಾಕುತ್ತಲೇ ಪತಿಗೆ ಸೆಲ್ಯೂಟ್ ಹೊಡೆದ ದೃಶ್ಯ ಮನಕಲಕುವಂತಿತ್ತು.
ನಮಾಂಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ನೂರಾರು ಸ್ಥಳೀಯರು ಜಮಾಯಿಸಿದ್ದರು. ಕುಶಾಲತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಭಾರತೀಯ ವಾಯುಪಡೆ ಅಧಿಕಾರಿಯ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಇಂದು ಬೆಳಗ್ಗೆ ಭಾರತಕ್ಕೆ ತರಲಾಯಿತು. ಇದಕ್ಕೂ ಮುನ್ನ ಎಮಿರೇಟ್ಸ್ ರಕ್ಷಣಾ ಪಡೆಗಳು ವಿದ್ಯುಕ್ತ ಗೌರವ ಸಲ್ಲಿಸಿ, ನಮಾಂಶ್ ಶೌರ್ಯ, ಸಾಹಸವನ್ನು ಶ್ಲಾಘಿಸಿದವು. ಅಲ್ಲದೇ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಮತ್ತು ಕಾನ್ಸುಲೇಟ್ ಜನರಲ್ ಸತೀಶ್ ಶಿವನ್ ಕೂಡ ಅಂತಿಮ ಗೌರವ ಸಲ್ಲಿಸಿದ್ದರು. ಈ ಕುರಿತು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿತ್ತು.
