ಉದಯವಾಹಿನಿ, ಚೆನ್ನೈ: ಎರಡು ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆರು ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತೆಂಕಾಸಿ ಜಿಲ್ಲೆಯಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದು, ಎರಡು ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ದುರ್ಘಟನೆಯಲ್ಲಿ 32ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಮಧುರೈನಿಂದ ಸೆಂಕೊಟ್ಟೈಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ತೆಂಕಾಸಿಯಿಂದ ಕೋವಿಲ್ಪಟ್ಟಿ ಕಡೆಗೆ ಹೋಗುತ್ತಿದ್ದ ಇನ್ನೊಂದು ಬಸ್ ಡಿಕ್ಕಿ ಹೊಡೆದಿವೆ. ಈ ಡಿಕ್ಕಿಯ ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡಿದ್ದು, ಸ್ಥಳೀಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರು ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಮಧುರೈನಿಂದ ಸೆಂಕೊಟ್ಟೈಗೆ ಹೋಗುತ್ತಿದ್ದ ಕೀಸರ್ ಬಸ್ ಚಾಲಕ ಬಹಳ ಅಜಾಗರೂಕತೆಯಿಂದ ಬಸ್ ಚಲಾಯಿಸುತ್ತಿದ್ದ. ಇದರ ಪರಿಣಾಮವಾಗಿಯೇ ಈ ದುರಂತ ಸಂಭವಿಸಿದೆ. ಕೀಸರ್ ಬಸ್ ಚಾಲಕನ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡ 32ಕ್ಕೂ ಹೆಚ್ಚು ಪ್ರಯಾಣಿಕರು ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಗಾಯಾಳುಗಳ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.
ಘಟನೆಯ ಬಗ್ಗೆ ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಾವುಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
ಸಿಎಂ ಸ್ಟ್ಯಾಲಿನ್ ಸಂತಾಪ: ಇನ್ನು ಘಟನೆ ಬಗ್ಗೆ ಸಿಎಂ ಎಂ.ಕೆ. ಸ್ಟ್ಯಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ತೆಂಕಾಸಿ ಕಡಯನಲ್ಲೂರಿನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಆರು ಜೀವಗಳ ದುರಂತ ನಷ್ಟದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಗಿದೆ. ಅಪಘಾತದ ಸ್ಥಳದಿಂದಲೇ ನನ್ನೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸೂಕ್ತವಾದ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಆದೇಶಿಸಿದ್ದೇನೆ. ಮೃತರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಕುಟುಂಬಸ್ಥರಿಗೆ ಗಾಯಗೊಂಡವರ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಅವರು ಬರೆದಿದ್ದಾರೆ.
