ಉದಯವಾಹಿನಿ, ಇಂದೋರ್: ಮಧ್ಯಪ್ರದೇಶ ರಾಜ್ಯದ ಪೊಲೀಸರು ರಾಜ್ಯದಲ್ಲಿ ನಡೆಯುತ್ತಿದ್ದ ಅತಿದೊಡ್ಡ ನಕಲಿ ಕರೆನ್ಸಿ ಜಾಲವನ್ನು ಭೇದಿಸಿದ್ದಾರೆ. ಪೊಲೀಸರು ನಡೆಸಿದ ನಿಯಮಿತ ತಪಾಸಣೆಯಲ್ಲಿ ಇದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದ ಎಂಬಿಬಿಎಸ್ ವೈದ್ಯರಾಗಿದ್ದರು.
ಖಾಂಡ್ವಾ ಪೊಲೀಸರು, ಡಾ.ಪ್ರತೀಕ್ ನವಲಾಖೆ ಮತ್ತು ಇತರ ಮೂವರ ಬಂಧನವನ್ನು ದೃಢಪಡಿಸಿದ್ದಾರೆ. ಖಾಂಡ್ವಾ ಜಿಲ್ಲಾ ಜೈಲಿನೊಳಗೆ ಪ್ರಾರಂಭವಾದ ಕಾರ್ಯಾಚರಣೆಯು ಬಹು-ರಾಜ್ಯ ನಕಲಿ ದಂಧೆಯಾಗಿ ಹೇಗೆ ಬೆಳೆದಿದೆ ಎಂಬುದನ್ನು ಈ ಕಾರ್ಯಾಚರಣೆ ಬಹಿರಂಗಪಡಿಸಿದೆ. ಈ ಗುಂಪು ನಕಲಿ ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಮುದ್ರಿಸಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ ಚಲಾವಣೆಗೆ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಕಲಿ ಹಣದ ಒಂದು ಭಾಗವನ್ನು ಆಸ್ತಿ ಖರೀದಿಸಲು ಸಹ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಬಂಧಿತ 43 ವರ್ಷದ ಡಾ. ನವಲಾಖೆ ಅವರು ಬುರ್ಹಾನ್‌ಪುರದವರಾಗಿದ್ದು, ಮೊದಲು ವೈದ್ಯಕೀಯ ಅಧಿಕಾರಿಯಾಗಿದ್ದರು. ಇಲ್ಲಿಯವರೆಗೆ ಸುಮಾರು 40 ಲಕ್ಷ ರೂಪಾಯಿಗಳನ್ನು ಮುದ್ರಿಸಿದ್ದಾರೆ. ಹಿಂದೆ 50 ರೂ. ನೋಟುಗಳನ್ನು ಮುದ್ರಿಸಲು ಪ್ರಯತ್ನಿಸಿದ್ದರು. ಪೊಲೀಸರಿಂದ ಕಣ್ತಪ್ಪಿಸಿಕೊಳ್ಳಲು ಅವರು ಈ ಹಿಂದೆ ಚಾರ್ ಧಾಮ್ ಯಾತ್ರೆಯಲ್ಲಿ ತಪ್ಪಿಸಿಕೊಂಡಿದ್ದರು. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಪೊಲೀಸರು ಈಗ ಗ್ಯಾಂಗ್‌ನ ಆರ್ಥಿಕ ಸಂಪರ್ಕಗಳು ಮತ್ತು ಆಸ್ತಿ ಖರೀದಿಗಳನ್ನು ಪತ್ತೆಹಚ್ಚುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!