ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ಅರೆಸೈನಿಕ ಪಡೆಯ ಪ್ರಧಾನ ಕಚೇರಿಯ ಮೇಲೆ ಸೋಮವಾರ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ದಾಳಿ ನಡೆಸಿದ್ದಾರೆ. ಮೂವರು ಭದ್ರತಾ ಅಧಿಕಾರಿಗಳು ಸಾವನ್ನಪ್ಪಿ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ. ವಾಯುವ್ಯ ಪಾಕಿಸ್ತಾನದ ಪೇಶಾವರದಲ್ಲಿರುವ ಫೆಡರಲ್ ಕಾನ್‌ಸ್ಟಾಬ್ಯುಲರಿಯ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ ದಾಳಿಕೋರರು ಶಸ್ತ್ರಸಜ್ಜಿತರಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿಯವರೆಗೆ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.ಪ್ರಧಾನ ಕಚೇರಿಯ ಒಳಗೆ ಆತ್ಮಹತ್ಯಾ ಸ್ಫೋಟಗಳು ಸಂಭವಿಸಿವೆ. ಒಂದು ಮುಖ್ಯ ದ್ವಾರದಲ್ಲಿ ಮತ್ತು ಇನ್ನೊಂದು ಆವರಣದಲ್ಲಿರುವ ಮೋಟಾರ್‌ಸೈಕಲ್ ಸ್ಟ್ಯಾಂಡ್ ಬಳಿ ಸಂಭವಿಸಿದೆ.
ಪೇಶಾವರದ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಕಾನ್‌ಸ್ಟಾಬ್ಯುಲರಿಯ ಸಂಕೀರ್ಣವಿದೆ. ಇಷ್ಟೊಂದು ಭದ್ರತೆ ಹೊಂದಿರುವ ಸಂಕೀರ್ಣವನ್ನು ಉಗ್ರರು ಒಳ ನುಸುಳಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಘಟನೆಯ ಬಳಿಕ ಪ್ರದೇಶವನ್ನು ಸುತ್ತುವರಿಯಲಾಗಿದೆ. ಐವರು ಭದ್ರತಾ ಅಧಿಕಾರಿಗಳು ಮತ್ತು ಏಳು ನಾಗರಿಕರು ಗಾಯಗೊಂಡಿದ್ದಾರೆ ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ.
ಪೇಶಾವರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಭಾಗವಾಗಿದೆ ಮತ್ತು ಇದು ಅಫ್ಘಾನಿಸ್ತಾನದ ಗಡಿಯಲ್ಲಿದೆ. ದೀರ್ಘಕಾಲದಿಂದ ಇಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿರುತ್ತದೆ.ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಎಂದೂ ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್ ಈ ಪ್ರಾಂತ್ಯದಲ್ಲಿ ಸಕ್ರಿಯವಾಗಿದೆ ಮತ್ತು ದೇಶಾದ್ಯಂತ ಇದೇ ರೀತಿಯ ದಾಳಿ ನಡೆದಾಗ ಹೊಣೆಗಾರಿಕೆಯನ್ನು ಹೊತ್ತುಕೊಂಡಿತ್ತು.
