ಉದಯವಾಹಿನಿ, ಪ್ಯಾರಿಸ್: ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ತಲುಪಿದ್ದು, ಈ ಪ್ರವಾಸದ ವೇಳೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜೊತೆ ಹಲವು ವಿಷಯಗಳ ಕುರಿತಂತೆ ಚರ್ಚೆ ನಡೆಸುವ ನಿರೀಕ್ಷೆ ಇದೆ. ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿಯೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಫ್ರಾನ್ಸ್‌ಗೆ ತೆರಳುವ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎರಡು ದೇಶಗಳ ದ್ವಿಪಕ್ಷೀಯ ಒಪ್ಪಂದಗಳಿಗೆ ಹೊಸ ಉತ್ತೇಜನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಒಪ್ಪಂದಗಳ ವಿಸ್ತರಣೆ ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಮಾತುಕತೆಯ ಪ್ರಮುಖ ಅಂಶವಾಗಿದೆ. ‘ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಭೇಟಿ ವೇಳೆ ವಿವಿಧ ವಿಷಯಗಳ ಕುರಿತಂತೆ ಚರ್ಚೆ ನಡೆಸುವ ಮೂಲಕ ಉಭಯ ದೇಶಗಳ ಸುದೀರ್ಘ ಒಡಂಬಡಿಕೆಯನ್ನು ಮುಂದಿನ 25 ವರ್ಷಗಳಿಗೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ’ಎಂದು ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತಂತೆಯೂ ನಾವು ಚರ್ಚೆ ನಡೆಸಲಿದ್ದೇವೆ’ಎಂದು ಮೋದಿ ತಿಳಿಸಿದ್ದಾರೆ.
