ಉದಯವಾಹಿನಿ, ಪಾಡೇರು: ಐಇಡಿ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಮಡಕಂ ದೇವಾ (42) ಎಂಬ ಮಾವೋವಾದಿ ಗುರುವಾರ ಆಂಧ್ರ ಪ್ರದೇಶದ ಪೊಲೀಸರಿಗೆ ಶರಣಾಗಿದ್ದಾರೆ. ಭಗತ್ ಎಂದೂ ಗುರುತಿಸಿಕೊಳ್ಳುವ ಮಡಕಂ ದೇವಾ, ಮಾವೋವಾದಿ ಸಿದ್ಧಾಂತದಿಂದ ಭ್ರಮನಿರಸನಗೊಂಡು ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸೀತಾರಾಮ ರಾಜು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಶರಣಾದರು. ಛತ್ತೀಸಗಡ ರಾಜ್ಯದ ಸುಕ್ಮಾ ಜಿಲ್ಲೆಯ ದಬ್ಬಕುಂಟಾ ಗ್ರಾಮದ ಮಡಕಂ ದೇವಾ, ಗುತ್ತಿ ಕೋಯಾ ಬುಡಕಟ್ಟು ಜನಾಂಗದವರು. ಸಿಪಿಐ ಪಕ್ಷದ ಪಿಎಲ್‌ಜಿಎ ಬೆಟಾಲಿಯನ್‌ನ ಎರಡನೇ ತುಕಡಿಯ ಕಮಾಂಡರ್ ಆಗಿದ್ದರು. ಭದ್ರತಾ ಸಿಬ್ಬಂದಿ ಮೇಲೆ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದರು ಎಂದು ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.
