ಉದಯವಾಹಿನಿ, ದೆಹಲಿ: ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಪ್ರಸ್ತಾಪಿತ ಕರ್ನಾಟಕದ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕರ್ನಾಟಕದ ಕೈಗಾರಿಕೆ ಹಾಗೂ ಸಾಗಣೆ ಕ್ಷೇತ್ರಗಳಿಗೆ ಪರಿವರ್ತನಾತ್ಮಕ ಕಾಯಕಲ್ಪ ನೀಡುವ ಈ ಯೋಜನೆಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂಬತ್ತು ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವ ಬಗ್ಗೆ ಒಲವು ತೋರಿದ್ದು, ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಇದೇ ನ.13ರಂದು ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದ ಸಚಿವ ಕುಮಾರಸ್ವಾಮಿ ಅವರು ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ಸುವಿಶಾಲವಾದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಮಾಡಬೇಕೆಂದು ಕೋರಿ ಮನವಿಯನ್ನು ಸಲ್ಲಿಸಿ ಮಾತುಕತೆ ನಡೆಸಿದ್ದರು. ಕುಮಾರಸ್ವಾಮಿ ಅವರ ಪ್ರಸ್ತಾವನೆಯನ್ನು ರಾಜ್ಯದ ಅಭಿವೃದ್ಧಿಗೆ ಪರಿವರ್ತನಾತ್ಮಕ ಪರಿಕಲ್ಪನೆ ಎಂದು ಶ್ಲಾಘಿಸಿದ್ದ ಗೋಯೆಲ್ ಅವರು, ಈ ಬಗ್ಗೆ ಉತ್ತರವನ್ನು ಬರೆದಿದ್ದಾರೆ. ಕರ್ನಾಟಕದ ಪ್ರಾದೇಶಿಕ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಇದು ಪೂರಕವಾಗಿದೆ. ಇಂತಹ ಆಕಾಂಕ್ಷೆಗಳನ್ನು ಈಡೇರಿಸುವ ಕೇಂದ್ರದ ರಚನಾತ್ಮಕ ಕೇಂದ್ರ ನೀತಿಯನ್ನು ಕಾರ್ಯರೂಪಕ್ಕೆ ತರುವಲ್ಲಿ ಈ ಕ್ರಮವು ಒಂದು ಪ್ರಮುಖ ಆರಂಭಿಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!