ಉದಯವಾಹಿನಿ, ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಆತ್ಮಾಹುತಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಸಹ ರದ್ದಾಗುವ ಭೀತಿ ಎದುರಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗದಿಂದ ವಿಶ್ವವಿದ್ಯಾಲಯಕ್ಕೆ ಶೋಕಾಸ್ ನೋಟಿಸ್ ನೀಡಿದ್ದು, ಅಲ್ಪಸಂಖ್ಯಾತ ಸ್ಥಾನಮಾನವನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಲಾಗಿದೆ.
ಆಯೋಗವು ಡಿ.4 ರಂದು ಈ ಸೂಚನೆಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ವಿಶೇಷ ಸ್ಥಾನಮಾನವನ್ನು ಪಡೆದ ಅಲ್ಪಸಂಖ್ಯಾತ ಸಮುದಾಯವು ವಿಶ್ವವಿದ್ಯಾನಿಲಯವನ್ನು ಇನ್ನೂ ನಿರ್ವಹಿಸುತ್ತಿದೆಯೇ? ಮಾಲೀಕತ್ವ ಅಥವಾ ನಿಯಂತ್ರಣದಲ್ಲಿ ಯಾವುದೇ ಬದಲಾವಣೆಯಾಗಿದೆಯೇ ಎಂಬುದನ್ನು ಆಯೋಗವು ತನಿಖೆ ಮಾಡುತ್ತದೆ. ಬಳಿಕ ಆಯೋಗ ಅಂತಿಮ ತಿರ್ಮಾನ ಕೈಗೊಳ್ಳಲಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಾಹುತಿ ದಾಳಿಕೋರ ಡಾ. ಉಮರ್-ಉನ್ ನಬಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಫರಿದಾಬಾದ್ ನಿವಾಸಿಯೊಬ್ಬರನ್ನು ಬಂಧಿಸಿದೆ. ದೆಹಲಿ ಭಯೋತ್ಪಾದಕ ಬಾಂಬ್ ಸ್ಫೋಟದ ಮೊದಲು ಭಯೋತ್ಪಾದಕ ಉಮರ್ ಉನ್ ನಬಿಗೆ ಲಾಜಿಸ್ಟಿಕ್ಸ್ ಬೆಂಬಲ ನೀಡಿದ ಆರೋಪದ ಮೇಲೆ ಹರಿಯಾಣದ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್ ಅವರನ್ನು ಸಂಸ್ಥೆ ಬಂಧಿಸಿದೆ.
