ಉದಯವಾಹಿನಿ, ನವದೆಹಲಿ: ಸ್ವತಂತ್ರ ಭಾರತಕ್ಕೆ ಸಂವಿಧಾನ ರೂಪಿಸಲು ರಚನಾ ಸಭೆ ಸ್ಥಾಪನೆಯಾಗಿದ್ದು 1946ರಲ್ಲಿ. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತ್ವತ್ವದಲ್ಲಿ ನೂರಾರು ಮಂದಿ ಸುಮಾರು ಮೂರು ವರ್ಷ ಶ್ರಮಿಸಿ ಸಂವಿಧಾನ ರೂಪಿಸಿದರು. ಸಂವಿಧಾನ ರಚನಾ ಸಭೆಯು 1949ರ ನ.26ರಂದು ಸಂವಿಧಾನವನ್ನ ಅಂಗೀಕರಿಸಿತು.
ದೇಶದಲ್ಲಿ ಸಂವಿಧಾನವು 1950 ಜ.26ರಂದು ಜಾರಿಗೆ ಬಂತು. ಸಂವಿಧಾನ ರಚನೆಯ ವೇಳೆ ಅಮೆರಿಕ, ಬ್ರಿಟನ್, ಐರ್ಲೆಂಡ್‌ನ ಸಂವಿಧಾನದ ಕೆಲವು ಅಂಶಗಳು, ಗಾಂಧಿ ತತ್ವಗಳಿಂದಲೂ ಪ್ರೇರಣೆ ಪಡೆಯಲಾಗಿದೆ. ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನ ಪಡೆದಿದ್ದು, ಹಲವು ದಾಖಲೆಗಳಿಗೆ ಪಾತ್ರವಾಗಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ತಿದ್ದುಪಡಿಗಳಾಗಿರುವ ಸಂವಿಧಾನ ಎನ್ನುವ ವಿಶೇಷತೆಯೂ ನಮ್ಮ ಸಂವಿಧಾನಕ್ಕಿದೆ.
ಭಾರತದಂತಹ ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯವಾದ ಸಂಸ್ಕೃತಿ, ಆಚರಣೆಗಳಿಂದ ಕೂಡಿರುವ ದೇಶಕ್ಕೆ ಸಂವಿಧಾನವನ್ನು ರೂಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದರೆ, ಅದಕ್ಕೆ ಕಾರಣ, ನಮ್ಮ ಸಶಕ್ತವಾದ ಸಂವಿಧಾನ. ಅದು ದೇಶದ ಆಡಳಿತ ಮತ್ತು ಜನರ ಚಿಂತನೆಯ ಚಾಲಕಶಕ್ತಿಯಾಗಿದೆ. ಈ ದಿನದಂದು ಸಂವಿಧಾನ ನಿರ್ಮಾತೃಗಳನ್ನು ಸ್ಮರಿಸುವ ಕೆಲಸ ಪ್ರಧಾನಿ ಮೋದಿ (Narendra Modi) ಮಾಡಿದ್ದಾರೆ.ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂವಿಧಾನ ದಿನದ ಶುಭಾಶಯ ಕೋರಿದ್ದಾರೆ.
