ಉದಯವಾಹಿನಿ, ಲಖನೌ: ಮದುವೆ ಮಾಡಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯಿಸಬೇಕಾಗುತ್ತದೆ. ಅದರಲ್ಲೂ ಬಡವರಿಗೆ ಈ ಮದುವೆ ಒಂದು ದೊಡ್ಡ ಜವಾಬ್ದಾರಿ ಎಂದೇ ಹೇಳಬಹುದು. ಹೀಗಾಗಿ ಬಹುತೇಕ ಬಡವರ್ಗದ ಜನರು ಸಾಮೂಹಿಕ ವಿವಾಹ ಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಸರ್ಕಾರಿ ಪ್ರಾಯೋಜಕತ್ವದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಚಿಪ್ಸ್ ಪ್ಯಾಕೆಟ್ ಗಾಗಿ ಮುಗಿಬಿದ್ದ ಜನರಿಂದ ಕಾಲ್ತುಳಿತವಾಗಿದ್ದು ಪರಿಣಾಮ ಅನೇಕರು ಗಾಯಗೊಂಡ ಘಟನೆ ನಡೆದಿದೆ. ಸಾಮೂಹಿಕ ವಿವಾಹದಲ್ಲಿ ಪರಸ್ಪರ ಖುಷಿಯಿಂದ ಸಮಾರಂಭ ಯಶಸ್ವಿಯಾಗುವ ಬದಲು ನೋವು, ಹಿಂಸೆಯಿಂದ ಸಾಕಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗುವಂತಾಗಿದೆ. ಮದುವೆ ಮನೆಯಲ್ಲಿ ತಿನ್ನುವ ತಿಂಡಿ ಪ್ಯಾಕೆಟ್ ಗಾಗಿ ಜನರು ಹೊಡೆದಾಟ ನಡೆಸುತ್ತಿದ್ದು ಇಡೀ ಮದುವೆ ಮನೆಯಲ್ಲಿ ಅವ್ಯವಸ್ಥೆಯಾಗಿರುವ ದೃಶ್ಯಗಳು ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಮುಖ್ಯಮಂತ್ರಿಗಳ ವಿವಾಹ ಯೋಜನೆಯಡಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭವು ನವೆಂಬರ್ 25 ರ ಮಂಗಳವಾರ ರಥ ಪಟ್ಟಣದ ಬ್ರಹ್ಮಾನಂದ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ಸುಮಾರು 383 ಬಡ ಕುಟುಂಬದ ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭಕ್ಕೆ ದೊಡ್ಡ ಜನಸಮೂಹ ನೆರೆದಿತ್ತು. ಸಾಮೂಹಿಕ ವಿವಾಹದ ವಿಧಿ ವಿಧಾನ ಗಳು ಪೂರ್ಣಗೊಂಡ ಬಳಿಕ ತಿಂಡಿ ಸವಿಯಲು ದೊಡ್ಡ ಜನಸಮೂಹ ಧಾವಿಸಿದೆ. ಹೀಗಾಗಿ ಸಂಪೂರ್ಣ ಅವ್ಯವಸ್ಥೆ ಉಂಟಾಗುವಂತಾಗಿದೆ.

Leave a Reply

Your email address will not be published. Required fields are marked *

error: Content is protected !!