ಉದಯವಾಹಿನಿ, ಢಾಕಾ: ಭ್ರಷ್ಟಾಚಾರ ಆರೋಪದ ಮೇಲೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಢಾಕಾ ನ್ಯಾಯಾಲಯ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಗುರುವಾರ ಆದೇಶಿಸಿದೆ.ಸಂಚು, ವಂಚನೆಯ ಮೂರು ಪ್ರಕರಣಗಳನ್ನು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಮೊಹಮ್ಮದ್ ಅಬ್ದುಲ್ಲಾ ಅಲ್ ಮಾಮುನ್ ಅವರು ತಲಾ 7 ವರ್ಷಗಳಂತೆ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.ಢಾಕಾದ ಪುರ್ಬಾಚಲ್ ಪ್ರದೇಶದಲ್ಲಿ ಸರ್ಕಾರಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶದ ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಶೇಖ್ ಹಸೀನಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ 6 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ. ಉಳಿದ ಮೂರು ಪ್ರಕರಣಗಳ ತೀರ್ಪು ಡಿಸೆಂಬರ್ 1 ರಂದು ಪ್ರಕಟವಾಗಲಿದೆ.
ಕುಟುಂಬಸ್ಥರಿಗೂ ಶಿಕ್ಷೆ ಪ್ರಕಟ: ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೀದ್ ಜಾಯ್ ಅವರಿಗೆ ನ್ಯಾಯಾಲಯವು 5 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ಟಾಕಾ ದಂಡ ವಿಧಿಸಿದೆ. ಜೊತೆಗೆ, ಹಸೀನಾ ಅವರ ಪುತ್ರಿ ಸೈಮಾ ವಾಜೀದ್ ಪುಟುಲ್ ಅವರಿಗೂ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ದೇಶದಲ್ಲಿ ದಂಗೆಯ ಬಳಿಕ ಶೇಖ್ ಹಸೀನಾ ಮತ್ತು ಅವರ ಕುಟುಂಬ ತಲೆಮರೆಸಿಕೊಂಡಿರುವ ಕಾರಣ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಾದಿಸಲು ಯಾವುದೇ ವಕೀಲರು ಇಲ್ಲವಾಗಿದೆ. ಈ ಹಿಂದೆ ಅವರು ಮಾಡಿರುವ ಭಾಷಣಗಳು ಮತ್ತು ನೀಡಿದ ಹೇಳಿಕೆಗಳಲ್ಲಿ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಅವರು ತಿರಸ್ಕರಿಸಿದ್ದಾರೆ.ಮರಣದಂಡನೆ ವಿಧಿಸಿರುವ ಐಸಿಟಿ: ಇದಕ್ಕೂ ಮೊದಲು ಮಾಜಿ ಪ್ರಧಾನಿ ಶೇಕ್​ ಹಸೀನಾ ಅವರಿಗೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಮರಣದಂಡನೆ ವಿಧಿಸಿದೆ. ಕಳೆದ ವರ್ಷ ಸರ್ಕಾರದ ವಿರುದ್ಧ ನಡೆದ ದಂಗೆಯನ್ನು ಹತ್ತಿಕ್ಕಲು ನಡೆಸಿದ ಪ್ರಯತ್ನಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಶೇಕ್​ ಹಸೀನಾ ಅವರೇ ಕಾರಣ ಎಂದು ಘೋಷಿಸಿರುವ ಕೋರ್ಟ್ ಅವರನ್ನು ತಪ್ಪಿತಸ್ಥರೆಂದು ಮರಣದಂಡನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!