ಉದಯವಾಹಿನಿ, ಮುಂಬೈ (ಮಹಾರಾಷ್ಟ್ರ): ಬಲವಂತ, ಮೋಸದ ಧಾರ್ಮಿಕ ಮತಾಂತರಗಳನ್ನು ತಡೆಯುವ ಗುರಿ ಹೊಂದಿರುವ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2026′ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಅಂಗೀಕರಿಸಿದೆ. ಮಸೂದೆಯ ಮೇಲೆ ಸುಮಾರು 5 ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಸೋಮವಾರ ರಾತ್ರಿ ಅಂಗೀಕರಿಸಲಾಯಿತು. ಇಂದು (ಮಂಗಳವಾರ) ವಿಧಾನ ಪರಿಷತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ.’ಯಾವುದೇ ಧರ್ಮದ ವಿರುದ್ಧದ ಅಸ್ತ್ರವಲ್ಲ’: ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಅದರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್​ ಅವರು, “ಇದು ಯಾವುದೇ ಧರ್ಮದ ವಿರುದ್ಧದ ತಂದ ಕಾನೂನಲ್ಲ. ಬಲವಂತದ, ಮೋಸದ ಹಾಗೂ ಆಮಿಷಗಳನ್ನೊಡ್ಡಿ ಮತಾಂತರ ಮಾಡುವವರನ್ನು ಹಣಿಯಲು ಈ ಕಾನೂನು ರೂಪಿಸಲಾಗಿದೆ. ಇದು ಎಲ್ಲರಿಗೂ, ಎಲ್ಲ ಧರ್ಮಗಳ ಆಚರಣೆಗೆ ಅವಕಾಶ ನೀಡುತ್ತದೆ” ಎಂದು ತಿಳಿಸಿದರು.
“ಈ ಧಾರ್ಮಿಕ ಸ್ವಾತಂತ್ರ್ಯ ಮಸೂದೆಯು ಈಗಾಗಲೇ ಒಡಿಶಾ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣ ಮತ್ತು ಜಾರ್ಖಂಡ್​ ಸೇರಿ 12 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಧಾರ್ಮಿಕ ಮತಾಂತರದ ಪ್ರಕರಣಗಳು ಹೆಚ್ಚಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿವೆ. ಇವುಗಳನ್ನು ನಿಯಂತ್ರಿಸಲು ಈ ಕಾನೂನನ್ನು ಪರಿಚಯಿಸಲಾಗುತ್ತಿದೆ” ಎಂದು ಮುಖ್ಯಮಂತ್ರಿ ಹೇಳಿದರು.

“ದೇಶದ ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದ್ದರೂ, ಬಲವಂತದ ಮತಾಂತರಗಳನ್ನು ತಡೆಗಟ್ಟಲು ಈ ಕಾನೂನು ತರುವುದು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದರ ಅನುಸಾರವಾಗಿ ಬಲವಂತ, ಮೋಸ, ವಂಚನೆ, ಆಮಿಷಗಳ ವಿರುದ್ಧವಾಗಿ ಈ ಕಾನೂನುಗಳನ್ನು ರೂಪಿಸಲಾಗಿದೆ” ಎಂದರು.

ಉದ್ಧವ್​ ಬಣದ ಶಿವಸೇನೆ ಬೆಂಬಲ: ಮಸೂದೆಯ ಕುರಿತು ವಿಪಕ್ಷಗಳಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಉದ್ಧವ್​ ಠಾಕ್ರೆ ಬಣದ ಶಿವಸೇನೆ ಧಾರ್ಮಿಕ ಮತಾಂತರ ನಿಯಂತ್ರಣ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರೆ, ಕಾಂಗ್ರೆಸ್​, ಸಮಾಜವಾದಿ ಪಕ್ಷ, ಶರದ್​ ಪವಾರ್​ ಬಣದ ಎನ್​ಸಿಪಿ ವಿರೋಧ ವ್ಯಕ್ತಪಡಿಸಿವೆ.

ಹೊಸ ಮಸೂದೆಯಲ್ಲಿ ಶಿಕ್ಷೆಯ ಪ್ರಮಾಣ ಹೀಗಿದೆ: ಬಲವಂತ, ಮೋಸ, ಆಮಿಷ ಮತ್ತು ಮದುವೆಯ ಕಾರಣಕ್ಕಾಗಿ ಮತಾಂತರ ಮಾಡುವುದನ್ನು ಈ ಮಸೂದೆಯು ನಿರ್ಬಂಧಿಸುತ್ತದೆ. ಮತಾಂತರದಲ್ಲಿ ತೊಡಗಿಕೊಂಡ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಇದರಲ್ಲಿ ಪ್ರಸ್ತಾಪಿಸಲಾಗಿದೆ.

ಮದುವೆಯ ಕಾರಣಕ್ಕಾಗಿ ಕಾನೂನು ಬಾಹಿರವಾಗಿ ಮತಾಂತರಕ್ಕೆ ಮುಂದಾದರೆ, ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸುವ ಪ್ರಸ್ತಾಪ ಕಾಯ್ದೆಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!