ಉದಯವಾಹಿನಿ, ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಫೇಸ್‌ಬುಕ್‍ನಲ್ಲಿ ತಮ್ಮ ಬಗ್ಗೆ ಅವಹೇಳನಕಾರಿ ಕಾಮೆಂಟ್‍ಗಳನ್ನು ಮಾಡಿದ ನಂತರ ಡೋನಾ ಗಂಗೂಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು ನೃತ್ಯ ಪ್ರದರ್ಶನ ನೀಡಿದ್ದರು. ಈ ವೇಳೆ ಕೆಲವರು ಡೋನಾ ಬಗ್ಗೆ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಡೋನಾ ಗಂಗೂಲಿ ಠಾಕೂರ್‌ಪುಕೂರ್ ಪೊಲೀಸರಲ್ಲಿ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಾರ್ವಜನಿಕವಾಗಿ ಅವಮಾನಿಸಿದ ಮತ್ತು ದೈಹಿಕವಾಗಿ ನಿಂದಿಸಿದ ಫೇಸ್‌ಬುಕ್ ಪುಟದ ವಿರುದ್ಧ ಔಪಚಾರಿಕವಾಗಿ ದೂರು ದಾಖಲಿಸಲು ನಾನು ಬರೆಯುತ್ತಿದ್ದೇನೆ. ನನ್ನ ವಿರುದ್ಧ ಪೋಸ್ಟ್ ಮಾಡಲಾದ ಅವಹೇಳನಕಾರಿ ವಿಷಯವು ತೀವ್ರ ಅಗೌರವದಿಂದ ಕೂಡಿದ್ದು, ನನ್ನ ಘನತೆ ಮತ್ತು ಖ್ಯಾತಿಗೆ ಹಾನಿ ಮಾಡಿದೆ. ಸಾರ್ವಜನಿಕ ವ್ಯಕ್ತಿ ಮತ್ತು ಕಲಾವಿದೆಯಾಗಿ, ಇದು ತನಗೆ ಮಾನಹಾನಿಕಾರಕವಾಗಿದೆ. ತನ್ನ ಬಗ್ಗೆ ಮಾಡಿರುವ ಪೋಸ್ಟ್, ತನ್ನ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಸಾಮಾಜಿಕ ಮಾಧ್ಯಮದ ಕಿರುಕುಳಕ್ಕೆ ಸಮಾನವಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಡೋನಾ ಗಂಗೂಲಿ ಬರೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಕೃತ್ಯಗಳು, ಮಾತುಗಳು ಅಥವಾ ಸನ್ನೆಗಳು ಅಪರಾಧವಾಗಿದ್ದು, ಬಿಎನ್‌ಎಸ್ ಸೆಕ್ಷನ್ 79ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಫೇಸ್ಬುಕ್ ಪುಟದ ವಿರುದ್ಧ ಮಾಡಿರುವ ದೂರು ಇದಾಗುವುದರಿಂದ, ಈ ಪ್ರೊಫೈಲ್ ಬಗ್ಗೆ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಡೋನಾ ಗಂಗೂಲಿ, ನಿಂದನೀಯ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಮತ್ತು ಫೇಸ್‌ಬುಕ್ ಪುಟಕ್ಕೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ಒದಗಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!