ಉದಯವಾಹಿನಿ, ಕೊಲಂಬೊ: ದಿತ್ವಾಹ್ ಚಂಡಮಾರುತದ ಅಬ್ಬರಕ್ಕೆ ಶ್ರೀಲಂಕಾದಲ್ಲಿ 123 ಜನರು ಸಾವನ್ನಪ್ಪಿದ್ದು, ಇನ್ನೂ 120ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಈವರೆಗೆ 123 ಜನರು ಬಲಿಯಾಗಿದ್ದಾರೆ. 120ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಸದ್ಯ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದು, ಈವರೆಗೂ 436,995 ಜನರನ್ನು ಸ್ಥಳಾಂತರಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಲು ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ನಾಪತ್ತೆಯಾದ 34 ಮಂದಿಗಾಗಿ ಶೋಧ ನಡೆದಿದೆ. 61,000 ಕುಟುಂಬಗಳಿಂದ 2 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ.ಈ ನಡುವೆ ಪ್ರವಾಹಕ್ಕೆ ತತ್ತರಿಸುತ್ತಿರುವ ಶ್ರೀಲಂಕಾಗೆ ನೆರವು ನೀಡಲು ಭಾರತ `ಆಪರೇಷನ್ ಸಾಗರ ಬಂಧು’ ಕಾರ್ಯಾಚರಣೆ ಶುರು ಮಾಡಿದೆ. ಇದರ ಭಾಗವಾಗಿ ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಗೊಂಡವರಿಗಾಗಿ ತುರ್ತು ಪರಿಹಾರ ಸಾಮಗ್ರಿಗಳನ್ನ ಕಳುಹಿಸಿದೆ. ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನವು ಇಂದು ಮುಂಜಾನೆ ಶ್ರೀಲಂಕಾಗೆ ತೆರಳಿದೆ.
