ಉದಯವಾಹಿನಿ, ವಾಷಿಂಗ್ಟನ್: ಅಫ್ಘಾನಿಸ್ತಾನ ಪಾಸ್‌ಪೋರ್ಟ್ ಹೊಂದಿರುವ ಎಲ್ಲಾ ಪ್ರಯಾಣಿಕರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ. ಇತ್ತೀಚಿಗೆ ಅಮೆರಿಕದ ಶ್ವೇತಭವನದ ಬಳಿ ಅಫ್ಘಾನ್ ಪ್ರಜೆ ನಡೆಸಿದ ಗುಂಡಿ ದಾಳಿಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಮಹಿಳಾ ಗಾರ್ಡ್ ಸಾವನ್ನಪ್ಪಿದ್ದು, ಮತ್ತೋರ್ವ ಸಿಬ್ಬಂದಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ವಿದೇಶಾಂಗ ಸಚಿವಾಲಯ ಅಫ್ಘಾನಿಸ್ತಾನ ಪಾಸ್‌ಪೋರ್ಟ್ ಹೊಂದಿರುವ ಎಲ್ಲಾ ಪ್ರಯಾಣಿಕರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.ಈ ಕುರಿತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಈಗಿನಿಂದಲೇ ಅಪ್ಘಾನಿಸ್ತಾನ ಪಾಸ್‌ಪೋರ್ಟ್ ಹೊಂದಿರುವ ಎಲ್ಲಾ ಪ್ರಯಾಣಿಕರಿಗೆ ಅಮೆರಿಕ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ದೇಶಕ್ಕೆ ಅಮೆರಿಕನ್ನರ ರಕ್ಷಣೆ ಹೊರತಾಗಿ ಹೆಚ್ಚೇನು ಬೇಕಿಲ್ಲ ಎಂದು ಬರೆದುಕೊಂಡಿದ್ದಾರೆ.ಇನ್ನೂ ವೀಸಾ ಜೊತೆಗೆ ಯುಎಸ್‌ನ ಪೌರತ್ವ ಹಾಗೂ ವಲಸೆ ಸೇವೆಗಳನ್ನು ಕೂಡ ನಿಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ವಿದೇಶಿಯರನ್ನು ಹೆಚ್ಚು ಪರೀಕ್ಷಿಸಲಾಗುವುದು. ದೇಶಕ್ಕೆ ಅಮೆರಿಕನ್ನರ ರಕ್ಷಣೆಯೇ ಮೊದಲ ಆದ್ಯತೆ ಎಂದಿದ್ದಾರೆ.
