ಉದಯವಾಹಿನಿ, ವಾಷಿಂಗ್ಟನ್: ಒಂಭತ್ತು ತಿಂಗಳಿನಿಂದ ಇಸ್ರೇಲ್ ನ ಜೈಲಿನಲ್ಲಿದ್ದ ಫೆಲೆಸ್ತೀನ್ ಮೂಲದ ಅಮೆರಿಕದ ಬಾಲಕ ಮುಹಮ್ಮದ್ ಇಬ್ರಾಹಿಂ (16) ಅವರನ್ನು ಇಸ್ರೇಲ್ ನ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಬಂಧನದಿಂದಾಗಿ ಬಾಲಕನ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಅಮೆರಿಕದ ಕಾಂಗ್ರೆಸ್‌ ಸದಸ್ಯರು ಮತ್ತು ಮಾನವಹಕ್ಕು ಸಂಘಟನೆಗಳಿಂದ ನಡೆದ ಅಭಿಯಾನದ ಪರಿಣಾಮ ಬಾಲಕನ ಬಿಡುಗಡೆ ಮಾಡಲಾಗಿದೆ ಎಂದು Aljazeera.com ವರದಿ ಮಾಡಿದೆ.
ಫ್ಲೋರಿಡಾ ಮೂಲದ ಮುಹಮ್ಮದ್ ಇಬ್ರಾಹಿಂ ಅವರನ್ನು ಫೆಬ್ರವರಿಯಲ್ಲಿ ರಮಲ್ಲಾ ಬಳಿಯ ಅಲ್-ಮಜ್ರಾ ಅಶ್-ಶಾರ್ಕಿಯಾ ಪಟ್ಟಣದಲ್ಲಿರುವ ಅವರ ಕುಟುಂಬದ ಮನೆಯಲ್ಲಿ ದಾಳಿ ಮಾಡಿ ಬಂಧಿಸಲಾಗಿತ್ತು. ಆ ವೇಳೆ ಅವರಿಗೆ 15 ವರ್ಷ ವಯಸ್ಸಾಗಿತ್ತು. ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿರುವ ಇಸ್ರೇಲ್ ನ ಪ್ರಜೆಗಳ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಬಾಲಕ ಮುಹಮ್ಮದ್ ಮೇಲೆ ಆರೋಪಿಸಲಾಗಿತ್ತು. ಆದರೆ ಈ ಆರೋಪವನ್ನು ಮುಹಮ್ಮದ್ ನಿರಾಕರಿಸಿದ್ದರು. ದಾಳಿಯ ವೇಳೆ, ಇಸ್ರೇಲ್ ಸೈನಿಕರು ಮುಹಮ್ಮದ್ ಇಬ್ರಾಹಿಂ ಕಣ್ಣಿಗೆ ಬಟ್ಟೆ ಕಟ್ಟಿ ಥಳಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು. ಬಂಧನದ ಅವಧಿಯಲ್ಲಿ ಕುಟುಂಬಕ್ಕೆ ಮುಹಮ್ಮದ್ ಇಬ್ರಾಹಿಂ ಅವರನ್ನು ಭೇಟಿ ಮಾಡಲು ಅವಕಾಶ ನೀಡದೆ, ಹೊರ ಜಗತ್ತಿನ ಸಂಪರ್ಕವನ್ನೂ ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು. ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳು ನೀಡುತ್ತಿದ್ದ ಮಾಹಿತಿಯೇ ಕುಟುಂಬಕ್ಕೆ ಲಭ್ಯವಾಗುತ್ತಿದ್ದ ಮಾಹಿತಿಯ ಮೂಲವಾಗಿತ್ತು.
ಜೈಲಿನಲ್ಲಿರುವ ಅವಧಿಯಲ್ಲಿ ಮುಹಮ್ಮದ್ ಇಬ್ರಾಹಿಂ 16ನೇ ವರ್ಷಕ್ಕೆ ಕಾಲಿಟ್ಟಿದ್ದರು. ತೀವ್ರ ತೂಕ ಇಳಿಸಿಕೊಂಡು, ಚರ್ಮದ ಸೋಂಕಿಗೂ ಒಳಗಾಗಿದ್ದರು ಎಂದು ವೈದ್ಯಕೀಯ ವರದಿಗಳು ಹೇಳಿವೆ. ಅವರ ಆರೋಗ್ಯ ಹದಗೆಟ್ಟಿರುವ ಮಾಹಿತಿ ಹೊರಬಿದ್ದ ನಂತರ ಅಮೆರಿಕದ ಕಾಂಗ್ರೆಸ್‌ ಸದಸ್ಯರು ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ ಟ್ರಂಪ್‌ ಆಡಳಿತಕ್ಕೆ ಮನವಿ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!