ಉದಯವಾಹಿನಿ, ಚಳಿಗಾಲದಲ್ಲಿ ದೊರೆಯುವ ಹಲವು ತರಕಾರಿಗಳ ಪೈಕಿ ಎಲೆಕೋಸು ಸಹ ಒಂದು. ಹಸಿರು ತರಕಾರಿಗಳನ್ನು ತಿನ್ನಬೇಕೆಂದು ಹೇಳಿದಾಗಲೆಲ್ಲ ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ತರಕಾರಿಗಳಲ್ಲಿ ಇದರ ಹೆಸರೂ ಇರುತ್ತದೆ. ಅತಿ ದುಬಾರಿ, ಸಿಕ್ಕಾಪಟ್ಟೆ ರುಚಿ ಮುಂತಾದ ಯಾವ ಪಟ್ಟಿಯಲ್ಲೂ ಸೇರದ ಎಲೆಕೋಸು, ʻಮಡಗಿದಂಗಿರುವʼ ಎನ್ನುವಂತೆ ನಮ್ರತೆಯಿಂದ ತನ್ನಷ್ಟಕ್ಕೆ ಇರುವಂಥದ್ದು. ಹಾಗೆಂದ ಮಾತ್ರಕ್ಕೆ ಇದರ ಸತ್ವಗಳು, ತಿನ್ನುವುದರಿಂದ ಲಾಭಗಳು ಕಡಿಮೆ ಎಂದು ಭಾವಿಸಬೇಕಿಲ್ಲ.
ಪೋಷಕಾಂಶಗಳು ಭರಪೂರ: ಇದರಲ್ಲಿ ಕ್ಯಾಲರಿಗಳು ಕಡಿಮೆ, ಸತ್ವಗಳು ಹೆಚ್ಚು. ಹಾಗಾಗಿ ಅನುಮಾನಕ್ಕೆ ಎಡೆಯಿಲ್ಲದಂತೆ ಹೊಟ್ಟೆತುಂಬಾ ಎಲೆಕೋಸಿನ ಪಲ್ಯ, ಸಲಾಡ್ ಇತ್ಯಾದಿಗಳನ್ನು ತಿನ್ನಬಹುದು. ಇದರ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಕೆ ಜೀವಸತ್ವವು ರಕ್ತ ಹೆಪ್ಪುಗಟ್ಟುವಲ್ಲಿ ನೆರವಾಗುತ್ತದೆ. ಇದಲ್ಲದೆ, ವಿಟಮಿನ್ ಬಿ೬, ಫೋಲೇಟ್ ಮತ್ತು ಮೆಗ್ನೀಶಿಯಂ ಸಹ ಎಲೆಕೋಸಿನಲ್ಲಿ ಧಾರಾಳವಾಗಿದೆ.
ಕ್ಯಾನ್ಸರ್ ತಡೆ: ಎಲೆಕೋಸಿನಲ್ಲಿರುವ ಗ್ಲೂಕೋಸಿನೋಲೇಟ್ ಎಂಬ ಅಂಶವು ಕ್ಯಾನ್ಸರ್ ತಡೆಯುವಲ್ಲಿ ಪರಿಣಾಮಕಾರಿ ಎನ್ನುತ್ತವೆ ಅಧ್ಯಯನಗಳು. ಸ್ತನ ಮತ್ತು ಕರುಳು ಕ್ಯಾನ್ಸರ್ ಸೇರಿದಂತೆ ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ತಡೆಯುವಲ್ಲಿ ಇವು ನೆರವಾಗುತ್ತವೆ. ಜೊತೆಗೆ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ನಿರ್ಬಂಧಿಸುವಲ್ಲಿಯೂ ಗ್ಲೂಕೋಸಿನೋಲೇಟ್ ಸಹಕಾರಿ ಎನ್ನಲಾಗುತ್ತಿದೆ.
ಜೀರ್ಣಾಂಗಗಳು ಚುರುಕು: ಇದರಲ್ಲಿ ನಾರಿನಂಶ ಹೇರಳವಾಗಿದ್ದು, ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಇದರಿಂದ ಮಲಬದ್ಧತೆಯನ್ನು ದೂರ ಮಾಡಿ, ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಬಹುದು. ಎಲೆಕೋಸಿನಲ್ಲಿರುವ ಗಂಧಕದ ಅಂಶಗಳು ಜೀರ್ಣಾಂಗಗಳ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಕಾರ ನೀಡುತ್ತವೆ.
ಉರಿಯೂತ ಶಮನ: ದೇಹದಲ್ಲಿ ಉರಿಯೂತ ಹೆಚ್ಚಿದಷ್ಟೂ ಹಲವು ರೀತಿಯ ರೋಗಗಳು ದಾಳಿಯಿಡುತ್ತವೆ. ಸಲ್ಫೋರಫೇನ್, ಕೆಂಫೆರೋಲ್ ನಂಥ ಹಲವು ಬಗೆಯ ಉತ್ಕರ್ಷಣ ನಿರೋಧಕಗಳು ಎಲೆಕೋಸಿನಲ್ಲಿವೆ. ಹಸಿರು ಬಣ್ಣದ ತರಕಾರಿಗಳನ್ನು ಹೆಚ್ಚು ಸೇವಿಸಿದಂತೆ ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತವೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಚಳಿಗಾಲದಲ್ಲಿ ಉರಿಯೂತಗಳು ಹೆಚ್ಚಾಗಿ ದೇಹವೆಲ್ಲಾ ನೋವಿನ ಗೂಡಾಗದಿರುವಂತೆ ಕಾಪಾಡಿಕೊಳ್ಳುವುದಕ್ಕೆ ಎಲೆಕೋಸಿನಂಥ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.
