ಉದಯವಾಹಿನಿ, ನವದೆಹಲಿ : ವಿಲಕ್ಷಣ ಆಹಾರ ತಯಾರಿ, ಅಚ್ಚರಿ ಮೂಡಿಸುವ ಹೊಸದಾದ ಆಹಾರ ಪ್ರಯೋಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಸದ್ಯ ಅಂತಹದ್ದೇ ಹೊಸ ಆಹಾರ ಪ್ರಯೋಗದ ಇನ್ನೊಂದು ವಿಡಿಯೊ ನೋಡುಗರನ್ನೇ ದಂಗಾಗುವಂತೆ ಮಾಡಿದೆ. ಭಾರತದ ಅತ್ಯಂತ ಪ್ರಿಯವಾದ ಬೀದಿ ಆಹಾರಗಳಲ್ಲಿ ಒಂದಾದ ಮೊಮೊಸ್ ತಯಾರಿಯ ವಿಡಿಯೊ ಇದಾಗಿದೆ. ಟಿಬೆಟ್ ಮತ್ತು ನೇಪಾಳ ಮೂಲದ ಜನಪ್ರಿಯ ಬೀದಿ ಆಹಾರ ಮೊಮೊಸ್ ಅನ್ನು ಇಂದು ಹಲವರು ಇಷ್ಟಪಟ್ಟು ಸೇವಿಸುತ್ತಾರೆ. ಸಾಮಾನ್ಯವಾಗಿ ಮೊಮೊಸ್ ಅನ್ನು ಖಾರದ ಮಸಲಾಗೆ ಮಾಂಸ ಅಥವಾ ತರಕಾರಿಗಳಿಂದ ತುಂಬಿಸಿ ಸಂಸ್ಕರಿಸಿದ ಹಿಟ್ಟಿನ ಮೂಲಕ ಮಸಾಲೆಯುಕ್ತ ಟೊಮೆಟೊ ಮತ್ತು ಕೆಂಪು ಮೆಣಸಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಆದರೆ ದೆಹಲಿಯ ಬೀದಿ ಬದಿಯ ವ್ಯಾಪರಿಯೊಬ್ಬರು ಫ್ರೂಟ್ ಗ್ರೇವಿ ಮೋಮೋ ತಯಾರಿಸುವ ಮೂಲಕ ಆಹಾರ ಪ್ರಿಯರನ್ನೇ ಹುಬ್ಬೆರಿಸುವಂತೆ ಮಾಡಿದ್ದಾರೆ.
ದೆಹಲಿ ಮೂಲದ ಬೀದಿ ಬದಿಯ ಮಾರಾಟಗಾರರೊಬ್ಬರು ಹಣ್ಣಿನ ಮೊಮೊವನ್ನು ತಯಾರಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೀಕ್ಷಣೆ ಪಡೆದಿದೆ. ವೈರಲ್ ಆದ ವಿಡಿಯೊದಲ್ಲಿ, ವ್ಯಾಪಾರಿಯು ಪ್ಲೇಟ್‌ನಲ್ಲಿರುವ ತಾಜಾ ಹಣ್ಣುಗಳಾದ ಸೇಬು, ಬಾಳೆಹಣ್ಣು, ದ್ರಾಕ್ಷಿ ಮತ್ತು ಮುಸುಂಬಿಯನ್ನು ಮೊದಲು ಸಣ್ಣಗೆ ಕತ್ತರಿಸುತ್ತಾರೆ. ನಂತರ ಹಣ್ಣುಗಳನ್ನು ಎಣ್ಣೆಯ ಪ್ಯಾನ್‌ಗೆ ವರ್ಗಾಯಿಸಿ ಮೊಮೊಸ್ ಮಾಡಲು ಪ್ರಾರಂಭಿಸುತ್ತಾರೆ. ಬಳಿಕ ಹಣ್ಣುಗಳಿಗೆ ಚೀಸ್ ಮಿಶ್ರಣ, ಚಿಲ್ಲಿ ಫ್ಲೇಕ್ಸ್, ಉಪ್ಪು ಮತ್ತು ಕೊನೆಗೆ ಫ್ರೆಶ್ ಕ್ರೀಮ್ ಅನ್ನು ಸೇರಿಸಿ ಅದನ್ನು ಗ್ರೇವಿ ರೀತಿ ಮಾಡುತ್ತಾರೆ. ಇದೇ ಗ್ರೇವಿಗೆ ಐದು ಪ್ರೈ ಮಾಡಿದ ಮೊಮೊ ತುಂಡುಗಳನ್ನು ಸೇರಿಸಿ ಬಡಿಸುತ್ತಾರೆ. ಈ ಸ್ಪೆಷಲ್ ಮೊಮೊಸ್ ಬೆಲೆ 200 ರೂ. ಎನ್ನಲಾಗಿದೆ.
