ಉದಯವಾಹಿನಿ, ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಜೊತೆ ಮದುವೆ ಮುಂದೂಡಲ್ಪಟ್ಟ ನಂತರ ಗಾಯಕ-ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಕಪ್ಪು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವ ಪಲಾಶ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಆವರಣದಲ್ಲಿ ಪಲಾಶ್ ಅವರು ನಡೆದುಕೊಂಡು ಬರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ನವೆಂಬರ್ 23ರಂದು ಸ್ಮೃತಿ ಮಂದಾನ ಮತ್ತು ಪಲಾಶ್ ಅವರ ವಿವಾಹ ನಿಗದಿಯಾಗಿತ್ತು. ಮದುವೆ ದಿನವೇ ಸ್ಮೃತಿ ತಂದೆಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಮದುವೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು ಎಂದು ವರದಿಯಾಗಿತ್ತು. ಮರುದಿನ ಪಲಾಶ್ ಅವರೂ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಸಾಂಗ್ಲಿಯಿಂದ ಮುಂಬೈ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಇದಾದ ಬೆನ್ನಲ್ಲೇ ಸ್ಮೃತಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಮದುವೆ ಸಮಾರಂಭದ ಫೋಟೊಗಳನ್ನು ಅಳಿಸಿ ಹಾಕಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಪಲಾಶ್ ಅವರು ಮೋಸ ಮಾಡಿದ್ದರಿಂದಲೇ ಮದುವೆ ನಿಂತಿದೆ ಎಂಬ ವದಂತಿಗಳು ಹರಡಿದ್ದವು.
ಮದುವೆ ಮುಂದೂಡಲು ನಿಖರ ಕಾರಣವೇನು ಎಂಬುದು ಈವರೆಗೆ ತಿಳಿದು ಬಂದಿಲ್ಲ. ಈ ಬಗ್ಗೆ ಎರಡು ಕುಟುಂಬಗಳು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

Leave a Reply

Your email address will not be published. Required fields are marked *

error: Content is protected !!