ಉದಯವಾಹಿನಿ, ಮಾಸ್ಕೋ : ರಷ್ಯಾದ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಡಿಸೆಂಬರ್ 4 ಮತ್ತು 5 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಲು ಇದು ಭಾರತ ಮತ್ತು ರಷ್ಯಾದ ನಾಯಕತ್ವಕ್ಕೆ ಒಂದು ಅವಕಾಶವಾಗಲಿದೆ.
ರಷ್ಯಾ ಅಧ್ಯಕ್ಷರ ಭೇಟಿಗೆ ಮುನ್ನ ಕ್ರೆಮಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, ಪುಟಿನ್ ಭಾರತ ಭೇಟಿಯ ಪ್ರಮುಖ ಉದ್ದೇಶವೆಂದರೆ ಸುಖೋಯ್ ಸು-57 ಸೈಲ್ತ್ ಫೈಟರ್ ಜೆಟ್‌ಗಳು ಮತ್ತು S-400 ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಪ್ರಮುಖ ರಕ್ಷಣಾ ಒಪ್ಪಂದಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಭೇಟಿಯ ಸಮಯದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಪುಟಿನ್ ಅವರ ಭಾರತ ಭೇಟಿಯ ಸಮಯದಲ್ಲಿ Su-57 ಗಳ ವಿಷಯವು ಖಂಡಿತವಾಗಿಯೂ ಕಾರ್ಯಸೂಚಿಯಲ್ಲಿರುತ್ತದೆ ಎಂದು ಪೆಸ್ಕೋವ್ ಹೇಳಿದರು. ನಾವು ನಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಬೇಕು, ಪರಸ್ಪರ ಪ್ರಯೋಜನವನ್ನು ತರುವ ನಮ್ಮ ವ್ಯಾಪಾರವನ್ನು ನಾವು ಭದ್ರಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಾಗತಿಕ ನಿರ್ಬಂಧಗಳು ವ್ಯಾಪಾರಕ್ಕೆ ಸವಾಲೊಡ್ಡುತ್ತಿದ್ದರೂ, ಭಾರತೀಯ ಹೂಡಿಕೆದಾರರಿಗೆ ಅನುಕೂಲಕರ ಪರಿಸ್ಥಿತಿಗಳನ್ನು ನೀಡಲು ರಷ್ಯಾ ಸಿದ್ಧವಾಗಿದೆ. ಎಲ್ಲಾ ನಿರ್ಬಂಧಗಳ ಹೊರತಾಗಿಯೂ ಭಾರತೀಯ ಮಾರುಕಟ್ಟೆಗಳು ರಷ್ಯಾದ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಮುಂದುವರಿಸುತ್ತಿವೆ ಎಂದು ಪೆಸ್ಕೋವ್ ಹೇಳಿದರು.
ಕೆಂಪು ಕೋಟೆ ದಾಳಿಗೆ ಖಂಡನೆ: ಇದೇ ವೇಳೆ ಪೆಸ್ಕೋವ್ ಅವರು, ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ದೇಶದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ನಮ್ಮ ದೇಶವು ಭಯೋತ್ಪಾದಕರ ಕೈಯಿಂದ ಬಹಳಷ್ಟು ಅನುಭವಿಸಿದೆ. ಅಲ್ಲದೇ ಭಯೋತ್ಪಾದಕ ಕೃತ್ಯಗಳಿಂದಾಗಿ ಜನರನ್ನು ಕಳೆದುಕೊಳ್ಳುವ ನೋವು ನಮಗೆ ತಿಳಿದಿದೆ ಎಂದ ಅವರು, ಭಯೋತ್ಪಾದನಾ ನಿಗ್ರಹ ಪ್ರಯತ್ನಗಳಲ್ಲಿ ಭಾರತಕ್ಕೆ ರಷ್ಯಾದ ಬೆಂಬಲವನ್ನು ಪುನರುಚ್ಚರಿಸಿದರು.
ಭಾರತದ ಸ್ನೇಹಪರ ನಿಲುವು ಶ್ಲಾಘಿಸಿದ ರಷ್ಯಾ ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ಸ್ನೇಹಪರ ನಿಲುವಿಗೆ ರಷ್ಯಾ ಕೃತಜ್ಞತೆಗಳನ್ನು ಸಲ್ಲಿಸಿತು. ಜಾಗತಿಕ ಸಮಸ್ಯೆಗಳಿಗೆ ಭಾರತದ ಸ್ವತಂತ್ರ ವಿಧಾನ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಯುತ್ತಿರುವ ಸಂವಾದವನ್ನು ಪೆಸ್ಕೋವ್ ಶ್ಲಾಘಿಸಿದರು.
