ಉದಯವಾಹಿನಿ, ವಾಷಿಂಗ್ಟನ್, ಅಮೆರಿಕ: ಶ್ವೇತಭವನದ ಬಳಿ ಗುಂಡಿನ ದಾಳಿಯಾದ ಬೆನ್ನಲ್ಲೇ ಅಮೆರಿಕ ತನ್ನ ವಲಸೆ ನೀತಿಯನ್ನು ಬಿಗಿಗೊಳಿಸಿದೆ. ಅಮೆರಿಕ ಇದೀಗ ಅಫ್ಘಾನಿಸ್ತಾನ, ಯೆಮೆನ್ ಮತ್ತು ಹೈಟಿ ಸೇರಿದಂತೆ 19 ರಾಷ್ಟ್ರಗಳ ನಾಗರಿಕರಿಗೆ ವಲಸೆ ಅರ್ಜಿಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಈ ಕುರಿತು ಅಮೆರಿಕ ಸರ್ಕಾರ ಅಧಿಕೃತ ಪತ್ರವನ್ನು ಹೊರಡಿಸಿದೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್ನಲ್ಲಿ ಘೋಷಿಸಿದ ಪ್ರಯಾಣ ನಿರ್ಬಂಧಗಳಿಗೆ ಒಳಪಟ್ಟಿರುವ ದೇಶಗಳ ಜನರಿಗೆ ಗ್ರೀನ್ ಕಾರ್ಡ್ ಮತ್ತು ಪೌರತ್ವ ಪ್ರಕ್ರಿಯೆಗಳಿಗೂ ಕೂಡ ತಡೆ ನೀಡಿದ್ದಾರೆ ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.
ಆ. 19 ರಾಷ್ಟ್ರಗಳಲ್ಲಿ ವೆನೆಜುವೆಲಾ, ಸುಡಾನ್ ಮತ್ತು ಸೊಮಾಲಿಯಾ ಕೂಡ ಸೇರಿವೆ. ಕಳೆದ ವಾರ ಶ್ವೇತಭವನದ ಬಳಿ ಇಬ್ಬರು ರಾಷ್ಟ್ರೀಯ ಗಾರ್ಡ್ಗಳ ಮೇಲಿನ ದಾಳಿ ಬಳಿಕ, ಅಮೆರಿಕ ತನ್ನ ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಅಲ್ಲದೇ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ. ಶ್ವೇತಭವನದ ಬಳಿ ನಡೆದ ದಾಳಿ, ಆಫ್ಘನ್ ವ್ಯಕ್ತಿಯಿಂದ ನಡೆದಿರುವ ಕೃತ್ಯ ಎಂದು ಶಂಕಿಸಲಾಗಿದ್ದು, 2021ರಲ್ಲಿ ತಾಲಿಬಾನ್‌ನಿಂದ ಪಲಾಯನ ಮಾಡಿದ್ದ ಆಫ್ಘನ್ ವ್ಯಕ್ತಿಯೊಬ್ಬ ಅಮೆರಿಕದಲ್ಲಿ ಬಂದು ನೆಲಸಿದ್ದ ಎಂಬುದನ್ನು ಪತ್ತೆಹಚ್ಚಲಾಗಿತ್ತು. ಭಯೋತ್ಪಾದಕರು ಅಮೆರಿಕದಲ್ಲಿ ಸುರಕ್ಷಿತ ತಾಣವನ್ನು ಹುಡುಕುವುದನ್ನು ತಡೆಯುವಲ್ಲಿ ಮತ್ತು ತಪಾಸಣೆ, ಪರಿಶೀಲನೆ ಮತ್ತು ಅಮೆರಿಕದ ಜನರ ಸುರಕ್ಷತೆಗೆ ಯುಎಸ್‌ಸಿಐಎಸ್ ಆದ್ಯತೆ ನೀಡುತ್ತದೆ. ಅಮೆರಿಕದ ಕಾನೂನುಗಳನ್ನು ಎತ್ತಿಹಿಡಿಯುತ್ತವೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಯುಎಸ್‌ಸಿಐಎಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಪತ್ರದಲ್ಲಿ ವಿವರಿಸಲಾಗಿದೆ.
ಸ್ಕ್ರೀನಿಂಗ್, ಪರಿಶೀಲನೆ ಮತ್ತು ಸೂಕ್ತ ತೀರ್ಪುಗಳಿಗೆ ಆದ್ಯತೆ ನೀಡುವ ಕೊರತೆಯು ಅಮೆರಿಕ ಜನರಿಗೆ ಏನು ಪರಿಣಾಮ ಉಂಟು ಮಾಡುತ್ತದೆ ಎಂದು ಅಮೆರಿಕ ಇತ್ತೀಚೆಗೆ ನೋಡಿದೆ ಎಂದು, ಕಳೆದ ವಾರ ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿಯನ್ನು ಉದಾಹರಣೆಯಾಗಿ ನೀಡಲಾಗಿದೆ.ಟ್ರಂಪ್ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಲಕ್ಷಾಂತರ ದಾಖಲೆರಹಿತ ವಲಸಿಗರನ್ನು ಗಡೀಪಾರು ಮಾಡುವ ಪ್ರತಿಜ್ಞೆ ಮಾಡಿದ್ದರು. ಇದೀಗ ಕಳೆದ ವಾರ ನಡೆದ ಗುಂಡಿನ ದಾಳಿಯ ನಂತರ ತೃತೀಯ ಜಗತ್ತಿನ ದೇಶಗಳಿಂದ ವಲಸೆಯನ್ನು ಶಾಶ್ವತವಾಗಿ ವಿರಾಮಗೊಳಿಸಲು ಯೋಜಿಸಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಜೂನ್ ಪ್ರಯಾಣ ನಿರ್ಬಂಧಗಳಿಗೆ ಒಳಪಡುವ ದೇಶಗಳ ಪಟ್ಟಿಯನ್ನು ವಿಸ್ತರಿಸುವಂತೆ ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಮುಖ್ಯಸ್ಥೆ ಕ್ರಿಸ್ಟಿ ನೋಯೆಮ್ ಇದೇ ವೇಳೆ ಒತ್ತಾಯಿಸಿದ್ದಾರೆ.
