ಉದಯವಾಹಿನಿ, ಮಾಸ್ಕೋ: ಯುರೋಪಿನ ದೇಶಗಳು ಉದ್ವಿಗ್ನತೆಯನ್ನು ಹೆಚ್ಚಿಸಿಕೊಳ್ಳವುದನ್ನೇ ಆಯ್ಕೆ ಮಾಡಿಕೊಂಡರೆ ನಾವು ಮಿಲಿಟರಿ ಸಂಘರ್ಷಕ್ಕೆ ಸಿದ್ಧರಾಗಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ಯುರೋಪಿನ ಸರ್ಕಾರಗಳು ಉಕ್ರೇನ್ ಕುರಿತಾದ ರಾಜತಾಂತ್ರಿಕ ಪ್ರಯತ್ನಗಳನ್ನು ತಡೆಯುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಮಂಗಳವಾರ ನಡೆದ ಹೂಡಿಕೆ ವೇದಿಕೆಯಲ್ಲಿ ಅವರು ಮಾತನಾಡಿದರು.
ನಾವು ಯುರೋಪಿನೊಂದಿಗೆ ಯುದ್ಧ ಮಾಡುವ ಬಗ್ಗೆ ಯೋಚಿಸುತ್ತಿಲ್ಲ. ಆದರೆ ಅವರು ಬಯಸಿ, ಶುರು ಮಾಡಿದರೆ ನಾವು ಈಗಲೇ ತಯಾರಾಗಿದ್ದೇವೆ ಎಂದರು. ಇದೇ ವೇಳೆ, ಯುರೋಪಿನ ನಾಯಕರು ಉಕ್ರೇನ್ ಕುರಿತ ವಿಚಾರಗಳಲ್ಲಿ ಮಾತುಕತೆಗಳಿಗೆ ಆದ್ಯತೆ ನೀಡುತ್ತಿಲ್ಲ. ಅದರ ಬದಲು, ಹಗೆತನವನ್ನೇ ಬೆಂಬಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಉಕ್ರೇನ್‌ಗೆ ಸಂಬಂಧಿಸಿದಂತೆ ರಷ್ಯಾ ಒಪ್ಪಿಕೊಳ್ಳಲು ಸಾಧ್ಯವಾಗದ ಬೇಡಿಕೆಗಳನ್ನು ಯುರೋಪಿನ ದೇಶಗಳು ಮುಂದಿಡುತ್ತಿವೆ. ಈ ಮೂಲಕ ಸಂಘರ್ಷವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡ ಕ್ರಮಗಳಿಗೆ ಯುರೋಪ್ ಅಡ್ಡಿಪಡಿಸುತ್ತಿದೆ. ಹಾಗಾಗಿ, ಅವರ ಯುದ್ಧದ ಪರವಾಗಿರುವಂತೆ ಕಾಣುತ್ತಿದೆ ಎಂದು ಪುಟಿನ್ ಹೇಳಿದರು.ಸುಮಾರು ನಾಲ್ಕು ವರ್ಷಗಳ ಯುದ್ಧ ಕೊನೆಗೊಳಿಸುವ ಕುರಿತು ಸಂಭಾವ್ಯ ಕ್ರಮಗಳನ್ನು ಚರ್ಚಿಸಲು ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಧ್ಯಕ್ಷೀಯ ಸಲಹೆಗಾರ ಜೇರೆಡ್ ಕುಶ್ನರ್ ಅವರು ಮಾಸ್ಕೋದಲ್ಲಿ ಪುಟಿನ್ ಅವರನ್ನು ಭೇಟಿಯಾದ ನಂತರದಲ್ಲಿ ಈ ಬೆಳವಣಿಗೆಗಳು ನಡೆದಿವೆ.ರಷ್ಯಾ – ಉಕ್ರೇನ್ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ 28 ಅಂಶಗಳ ಶಾಂತಿ ಪ್ರಸ್ತಾವನೆ ಮುಂದಿಟ್ಟಿದೆ. ಇದಕ್ಕೆ ಉಕ್ರೇನ್ ಮತ್ತು ಯುರೋಪ್ ದೇಶಗಳು ವಿರೋಧ ವ್ಯಕ್ತಪಡಿಸಿ, ಇದು ರಷ್ಯಾದ ಷರತ್ತುಗಳಿಗೆ ತುಂಬಾ ಹೊಂದಿಕೊಳ್ಳುವಂತಿದೆ ಎಂದು ಕಟು ಟೀಕೆ ಮಾಡಿದ್ದವು. ಇದಾದ ನಂತರ ಪ್ರಸ್ತಾವನೆಯನ್ನು ಪರಿಷ್ಕರಿಸಲಾಗಿತ್ತು. ಇಂಥ ಯಾವುದೇ ಶಾಂತಿ ಒಪ್ಪಂದವು ಪ್ರಸ್ತುತ ರಷ್ಯಾ ನಿಯಂತ್ರಣದಲ್ಲಿರುವ ಉಕ್ರೇನ್‌ನ ಪ್ರದೇಶವನ್ನು ಬಿಟ್ಟುಕೊಡುವಂತೆ ಒತ್ತಡ ಹೇರಬಹುದು ಎಂದು ಯುರೋಪ್ ಕಳವಳ ವ್ಯಕ್ತಪಡಿಸುತ್ತಿದೆ.
