ಉದಯವಾಹಿನಿ, ಕೊಲೊಂಬೊ(ಶ್ರೀಲಂಕಾ): ದಿತ್ವಾ ಚಂಡಮಾರುತದಿಂದ ಉಂಟಾದ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿದ ಶ್ರೀಲಂಕಾಕ್ಕೆ ಭಾರತ ನೆರವಾಗುತ್ತಿದೆ. ಅಲ್ಲಿನ ಸಂತ್ರಸ್ತರ ಅನುಕೂಲಕ್ಕಾಗಿ ಮೊಬೈಲ್​ ಆಸ್ಪತ್ರೆ ಮತ್ತು 70ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿದೆ.ವ್ಯಾಪಕ ಪ್ರವಾಹ, ಭೂಕುಸಿತಕ್ಕೆ ಒಳಗಾಗಿರುವ ಶ್ರೀಲಂಕಾದಲ್ಲಿ ಮೂಲಸೌಕರ್ಯಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದು, ಹಲವಾರು ಜಿಲ್ಲೆಗಳಲ್ಲಿ ಸಂಪರ್ಕ ಕಡಿದುಕೊಂಡಿದೆ. ದೇಶದ ವಿಪತ್ತು ಪ್ರತಿಕ್ರಿಯೆ ಸಾಮರ್ಥ್ಯ ಕುಸಿದಿದೆ. ಹವಾಮಾನ ವೈಪರೀತ್ಯದಿಂದ ಉಂಟಾದ ಭಾರಿ ಪ್ರವಾಹ ಮತ್ತು ಭೂಕುಸಿತದಿಂದ ಈವರೆಗೆ 465 ಜನರು ಸಾವನ್ನಪ್ಪಿದ್ದು, 366 ಜನರು ಕಾಣೆಯಾಗಿದ್ದಾರೆ.ವಿಪತ್ತುಪೀಡಿತ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಸೇವೆಯನ್ನು ಒದಗಿಸಲು ಭಾರತ 70ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯೊಂದಿಗೆ ತ್ವರಿತವಾಗಿ ನಿಯೋಜಿಸಬಹುದಾದ ಮೊಬೈಲ್​​​ ಆಸ್ಪತ್ರೆಯನ್ನು ಕಳುಹಿಸಿಕೊಟ್ಟಿದೆ ಎಂದು ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.
ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ವಿಮಾನವು ಪ್ಯಾರಾ ಮೊಬೈಲ್ ಆಸ್ಪತ್ರೆಯನ್ನು ಉತ್ತರ ಪ್ರದೇಶದ ಆಗ್ರಾದಿಂದ ಉಪಕರಣಗಳು ಮತ್ತು 73 ವೈದ್ಯಕೀಯ ಸಿಬ್ಬಂದಿಯೊಂದಿಗೆ ವಿಮಾನದಲ್ಲಿ ಕಳುಹಿಸಿದೆ. ಪರಿಹಾರ ಸಾಮಗ್ರಿ ಹೊತ್ತ ವಿಮಾನ ಮಂಗಳವಾರ ಸಂಜೆ ಕೊಲಂಬೊದಲ್ಲಿ ಇಳಿಯಿತು ಎಂದು ಪಿಆರ್​ಇ ಡಿಫೆನ್ಸ್​ ಜಮ್ಮು ಪೋಸ್ಟ್​ನಲ್ಲಿ ತಿಳಿಸಿದೆ.ಐಎಎಫ್​ ಎಂಐ-17 ಹೆಲಿಕಾಪ್ಟರ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಂಟು ಟನ್‌ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಯನ್ನು ವಿಮಾನದ ಮೂಲಕ ಸಾಗಿಸಲಾಗುತ್ತಿದೆ. ವಿದೇಶಿ ಪ್ರಜೆಗಳು, ತೀವ್ರ ಅಸ್ವಸ್ಥ ರೋಗಿಗಳು ಮತ್ತು ಗರ್ಭಿಣಿಯರೂ ಸೇರಿದಂತೆ ಬದುಕುಳಿದವರನ್ನು ಸ್ಥಳಾಂತರಿಸಲಾಗುತ್ತಿದೆ. ಭಾರತೀಯ ರಕ್ಷಣಾ ತಂಡಗಳು ಅನೇಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಮಾಹಿತಿ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!