ಉದಯವಾಹಿನಿ, ಹೈದರಾಬಾದ್: ಮದೀನಾದಿಂದ ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
180 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತು ಬರುತ್ತಿದ್ದ 6E58 ವಿಮಾನ ಮಧ್ಯಾಹ್ನ 12:30 ರ ಸುಮಾರಿಗೆ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಾಗ ವಿಮಾನವು ಆಕಾಶದಲ್ಲೇ ಇತ್ತು. ಬಳಿಕ ಅಹಮದಾಬಾದ್ ಹತ್ತಿರದ ವಿಮಾನ ನಿಲ್ದಾಣವಾಗಿದ್ದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ವಿಮಾನವನ್ನು ಅಲ್ಲಿ ಲ್ಯಾಂಡ್ ಮಾಡುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದೇಶಾದ್ಯಂತ 200 ವಿಮಾನಗಳ ಹಾರಾಟ ರದ್ದು – ಕ್ಷಮೆ ಕೋರಿದ ಇಂಡಿಗೋ
ಲ್ಯಾಂಡಿಂಗ್ ನಂತರ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ, ಸ್ಥಳೀಯ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಈ ವೇಳೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲಜೀಜ್ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ 2:10 ಕ್ಕೆ ಹೊರಡಬೇಕಿದ್ದ ವಿಮಾನವು ಬೆಳಿಗ್ಗೆ 5:29ಕ್ಕೆ ಹೊರಟಿತ್ತು. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 12:30ರ ಸುಮಾರಿಗೆ ಲ್ಯಾಂಡ್ ಆಗುವ ನಿರೀಕ್ಷೆಯಿತ್ತು.
