ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ನಿರ್ಮಿಸುವ ಯೋಜನೆ ಘೋಷಿಸಿ ದೊಡ್ಡ ವಿವಾದ ಹುಟ್ಟುಹಾಕಿದ್ದ ಶಾಸಕ ಹುಮಾಯೂನ್ ಕಬೀರ್‌ನನ್ನ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಅಮಾನತುಗೊಳಿಸಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಬೀರ್ ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವ ದಿನವಾದ ಡಿಸೆಂಬರ್ 6ರಂದೇ ಬೆಲ್ದಂಗಾದಲ್ಲಿ ಮಸೀದಿಗೆ ಅಡಿಪಾಯ ಹಾಕುವುದಾಗಿ ಘೋಷಿಸಿದ್ದರು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕ ಮತ್ತು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ , ಕಬೀರ್ ಬಿಜೆಪಿ ಬೆಂಬಲದೊಂದಿಗೆ ಕೋಮುವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಪಕ್ಷವೂ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದ್ರೂ ಪದೇ ಪದೇ ವಿವಾದಿತ ಹೇಳಿಕೆ ನೀಡುತ್ತಲೇಬಂದಿದ್ದಾರೆ. ಅದಕ್ಕಾಗಿ ಕಬೀರ್‌ನನ್ನ ಪಕ್ಷ ಅಮಾನತುಗೊಳಿಸಿದೆ. ಇನ್ಮುಂದೆ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧ ಇರಲ್ಲ ಎಂದು ಹಕೀಮ್ ಹೇಳಿದ್ದಾರೆ.
ಕಬೀರ್ ಹೇಳಿದ್ದೇನು?
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹುಮಾಯೂನ್ ಕಬೀರ್, ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವ ದಿನವಾದ ಡಿಸೆಂಬರ್ 6ರಂದು ಬೆಲ್ದಂಗಾದಲ್ಲಿ ಮಸೀದಿಗೆ ಅಡಿಪಾಯ ಹಾಕುವುದಾಗಿ ಘೋಷಿಸಿದ್ದರು. ಈಗ ತಮ್ಮ ಯೋಜನೆಯಲ್ಲಿ ಹಸ್ತಕ್ಷೇಪ ಮಾಡದಂತೆ ಆಡಳಿತಕ್ಕೇ ಎಚ್ಚರಿಕೆ ನೀಡಿದ್ದರು. ಪೊಲೀಸರು ಮತ್ತು ಆಡಳಿತವು ನನ್ನನ್ನ ತಡೆಯಲು ಪ್ರಯತ್ನಿಸಿದರೆ, ರೆಜಿನಗರದಿಂದ ಬಹರಾಮ್‌ಪುರದವರೆಗಿನ ರಾಷ್ಟ್ರೀಯ ಹೆದ್ದಾರಿಯ 30 ಕಿ.ಮೀ ಉದ್ದದ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ. ನಾನು ಅವರಿಗೆ ಬಹಿರಂಗ ಸವಾಲು ನೀಡುತ್ತಿದ್ದೇನೆ. ಅವರು ನನಗೆ ಸವಾಲು ಹಾಕಿದರೆ, ನಾನು ಅವರ ವಿರುದ್ಧ ಮಾತನಾಡುತ್ತೇನೆ. ನಾವು ಈಗಾಗಲೇ ಭೂಮಿಯನ್ನ ಗುರುತಿಸಿ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ಈ ಭೂಮಿ ಆರು ಮಾಲೀಕರ ನಡುವೆ ಹಂಚಿಕೆಯಾಗಿದ್ದು, ಈ ಪೈಕಿ ನಾಲ್ವರು ಭೂಮಿಯನ್ನು ಕೊಡಲು ಸಿದ್ಧರಿದ್ದಾರೆ. ಇನ್ನಿಬ್ಬರು ಮಾಲೀಕರನ್ನು ಒಪ್ಪಿಸಿದ ಮೇಲೆಯೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು.
