ಉದಯವಾಹಿನಿ, ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ತಂಡ ಮೊದಲನೇ ಪಂದ್ಯದಲ್ಲಿ 101 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಎರಡನೇ ಪಂದ್ಯ ಡಿಸೆಂಬರ್ 11 ರಂದು ಮುಲ್ಲಾನ್‌ಪುರದ ಮಹಾರಾಜ ಯದುವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಮೊದಲನೇ ಪಂದ್ಯದಲ್ಲಿ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವ ತವಕದಲ್ಲಿದ್ದರೆ, ಇತ್ತ ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ. ಶುಭಮನ್ ಗಿಲ್ ಏಷ್ಯಾಕಪ್ ಟೂರ್ನಿಯ ಟಿ20 ತಂಡಕ್ಕೆ ಮರಳಿದಾಗಿನಿಂದ ಸಂಜು ಸ್ಯಾಮ್ಸನ್ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಇದರ ನಡುವೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್‌ಗುಪ್ತಾ ಮಾತನಾಡಿದ್ದು, ಸಂಜು ಸ್ಯಾಮ್ಸನ್ ಅವರಿಗೆ ಟಿ20 ವಿಶ್ವಕಪ್‌ನಲ್ಲೂ ಸ್ಥಾನ ಸಿಗುವುದು ಅನುಮಾನ ಎಂದು ಭವಿಷ್ಯ ನುಡಿದಿದ್ದಾರೆ.
ಸಂಜು ಸ್ಯಾಮ್ಸನ್ ಅವರ ಟಿ20 ವಿಶ್ವಕಪ್ ಭವಿಷ್ಯದ ಬಗ್ಗೆ ಮಾತನಾಡಿದ ದೀಪ್ ದಾಸ್‌ಗುಪ್ತಾ, ಸಂಜು ಸ್ಯಾಮ್ಸನ್ ಅವರ ಬದಲಿಗೆ ಜಿತೇಶ್ ಶರ್ಮಾ ಅವರಿಗೆ ಸ್ಥಾನ ನೀಡುವುದು ಉತ್ತಮ. ಏಕೆಂದರೆ, ಜಿತೇಶ್ ಶರ್ಮಾ ಅವರು ಕೆಳ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಹೇಳಿದ್ದಾರೆ. “ಇದು ಸರಿಯಾದ ನಿರ್ಧಾರ. ಸಂಜು ಸ್ಯಾಮ್ಸನ್ ಮೊದಲ ಮೂರು ಕ್ರಮಾಂಕಗಳಲ್ಲಿ ಆಡದೇ ಇದ್ದರೆ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರೆ, ನೀವು ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಿಂತ ಕೆಳ ಕ್ರಮಾಂಕದಲ್ಲಿ ವಿಶೇಷ ಬ್ಯಾಟ್ಸ್‌ಮನ್ ಆಡುವುದು ಒಳಿತು. ಎರಡು ಅಥವಾ ನಾಲ್ಕು ಎಸೆತಗಳಿಗೆ ಬ್ಯಾಟ್ ಮಾಡುವುದು ಸುಲಭವಲ್ಲ. ಜಿತೇಶ್ ಆ ವಿಷಯದಲ್ಲಿ ಸ್ಪೆಷಲಿಸ್ಟ್,” ಎಂದು ದೀಪ್ ದಾಸ್‌ಗುಪ್ತಾ ತಿಳಿಸಿದ್ದಾರೆ.
