ಉದಯವಾಹಿನಿ, ಭುವನೇಶ್ವರ : 14 ವರ್ಷದ ವಿದ್ಯಾರ್ಥಿಯೊಬ್ಬ ಶಾಲೆಗೆ ದೇಸಿ ರಿವಾಲ್ವರ್ ತಂದು, ಮುಖ್ಯೋಪಾಧ್ಯಾಯರಿಗೆ ಬೆದರಿಕೆ ಹಾಕಿರುವ ಘಟನೆ ಒಡಿಶಾದ ಕೇಂದ್ರಪಾರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಯು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಾಲಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು. ನಂತರ ಆತನನ್ನು ಅಂಗುಲ್‌ನಲ್ಲಿರುವ ಪ್ರೊಬೇಷನ್ ಹಾಸ್ಟೆಲ್-ಕಮ್-ಅಬ್ಸರ್ವೇಷನ್ ಹೋಮ್ ಮತ್ತು ಸ್ಪೆಷಲ್ ಹೋಮ್‌ಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ಕೊರುವಾ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಬಾಲಕನಿಗೆ ಗದರಿಸಿದ್ದರು ಎನ್ನಲಾಗಿದೆ. ಅಧ್ಯಯನದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಮತ್ತು ತರಗತಿಯಲ್ಲಿ ಕಿರಿಕಿರಿ ಉಂಟು ಮಾಡಿದ್ದಕ್ಕಾಗಿ ಗದರಿಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಕೋಪಗೊಂಡ ಬಾಲಕ ಶಾಲೆಗೆ ರಿವಾಲ್ವರ್ ತಂದು ಮುಖ್ಯೋಪಾಧ್ಯಾಯರಿಗೆ ಬೆದರಿಸಿದ್ದಾನೆ.
