ಉದಯವಾಹಿನಿ, ನವದೆಹಲಿ: ದೆಹಲಿಯು ನಿಜಕ್ಕೂ ಅಚ್ಚರಿಗಳ ನಗರ. ರಾಷ್ಟ್ರ ರಾಜಧಾನಿ ಕೇವಲ ಕುತುಬ್ ಮಿನಾರ್ ಮತ್ತು ಕೆಂಪುಕೋಟೆಯಂತಹ ಐತಿಹಾಸಿಕ ಸ್ಮಾರಕಗಳಿಗೆ ಮಾತ್ರ ಸೀಮಿತವಾಗಿಲ್ಲ. ದಿನನಿತ್ಯದ ಘಟನೆಗಳ ಮೂಲಕವೂ ಈ ನಗರ ಜನರನ್ನು ಅಚ್ಚರಿಗೊಳಿಸುತ್ತದೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಮಧ್ಯೆ ಕುಸ್ತಿ ನಡೆದುದರ ವಿಡಿಯೊ ವೈರಲ್ ಆಗುವುದರಿಂದ ಹಿಡಿದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ದೃಶ್ಯಗಳವರೆಗೆ ಇಲ್ಲಿ ಪ್ರತಿದಿನವೂ ಏನಾದರೊಂದು ವಿಶೇಷ ಘಟನೆ ಸಂಭವಿಸುತ್ತಲೇ ಇರುತ್ತದೆ. ಇದೀಗ ಸಂಚಾರ ನಿಯಮ ಉಲ್ಲಂಘಿಸಿರುವ ದೃಶ್ಯದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಸ್ತೆಯಲ್ಲಿ ಒಂದೇ ಬೈಕ್ ಮೇಲೆ 6 ಮಂದಿ ಪ್ರಯಾಣಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.
ಒಂದು ಬೈಕ್‍ನಲ್ಲಿ ಇಬ್ಬರಷ್ಟೇ ಕುಳಿತುಕೊಳ್ಳಬಹುದು. ಆದರೆ ಕೆಲವರು ಮೂವರು ಸವಾರಿ ಮಾಡುತ್ತಾರೆ. ಇನ್ನೂ ಹೆಚ್ಚೆಂದರೆ 4 ಜನ ಸವಾರಿ ಮಾಡಬಹುದು. ಆದರೆ ಇಲ್ಲಿ ಆರು ಮಂದಿ ಯುವಕರು ಒಂದೇ ಬೈಕ್‍ನಲ್ಲಿ ಸವಾರಿ ಮಾಡಿದ್ದಾರೆ. ಈ ಅಪಾಯಕಾರಿ ಸಾಹಸದ ವಿಡಿಯೊವನ್ನು ಡಿಸೆಂಬರ್ 12ರಂದು, ಪತ್ರಕರ್ತ ಅರವಿಂದ್ ಶರ್ಮಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಕಳವಳ ವ್ಯಕ್ತಪಡಿಸಿದ್ದಾರೆ.
