ಉದಯವಾಹಿನಿ, ಲಖನೌ : ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ 2ನೇ ವಾರ್ಷಿಕೋತ್ಸವ ಡಿಸೆಂಬರ್ 31ರಂದು ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. 51 ಇಂಚು ಎತ್ತರದ ಬಾಲಕ ರಾಮನ ವಿಗ್ರಹವನ್ನು ಅಯೋಧ್ಯೆ ರಾಮ ಮಂದರದಲ್ಲಿ ಸ್ಥಾಪಿಸಿ 2024ರ ಜನವರಿ 22ರಂದು ಪ್ರಾಣ ಪ್ರತಿಷ್ಠೆ ಕೈಗೊಳ್ಳುವ ಮೂಲಕ ಹಿಂದೂಗಳ ಶತಮಾನಗಳ ಕನಸು ನನಸುಗೊಳಿಸಲಾಯಿತು. ಇದೀಗ ಈ ಐತಿಹಾಸಿಕ ಸಮಾರಂಭಕ್ಕೆ 2 ವರ್ಷ ತುಂಬುತ್ತಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 2ನೇ ವಾರ್ಷಿಕೋತ್ಸವ ನೆರವೇರಿಸಲಾಗುತ್ತದೆ.ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆದಿದ್ದರೂ ಹಿಂದೂ ಕ್ಯಾಲಂಡರ್ ಪ್ರಕಾರ ಈ ಬಾರಿ ಡಿಸೆಂಬರ್ 31ರಂದು ವಾರ್ಷಿಕೋತ್ಸವ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವ ಈ ವರ್ಷದ ಜನವರಿ 11ರಂದು ನಡೆಯಿತು. 2025 ಆ ಮೂಲಕ 2 ವಾರಷಿಕೋತ್ಸವಕ್ಕೆ ಸಾಕ್ಷಿಯಾಗುತ್ತಿದೆ.
ಹಿಂದೂ ಕ್ಯಾಲಂಡರ್ ಪ್ರಕಾರ ಆಚರಣೆ: ಹಿಂದೂ ಕ್ಯಾಲಂಡರ್ ಪ್ರಕಾರ ರಾಮನ ಪ್ರಾಣ ಪ್ರತಿಷ್ಠೆಯನ್ನು ಪೌಷ ಮಾಸದ ಶುಕ್ಲ ಪಕ್ಷದ ಕೂರ್ಮ ದ್ವಾದಶಿಯಂದು ನೆರವೇರಿಸಲಾಗಿದೆ. ಅದರಂತೆ ವಿಶೇಷ ಈ ದಿನ 2025ರ ಜನವರಿ 11 ಮತ್ತು ಡಿಸೆಂಬರ್ 31ರಂದು ಬಂದಿರುವುದರಿಂದ ಅಂದೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ರಾಮ ಮಂದಿರದ ಸಂಕೀರ್ಣದಲ್ಲಿರುವ ಶಿವ, ಸೂರ್ಯ, ಗಣಪತಿ, ಹನುಮಂತ, ಭಗವತಿ, ಅನ್ನಪೂರ್ಣ ಮತ್ತು ಶೇಷವತಾರ ದೇವಸ್ಥಾನಗಳಲ್ಲೂ ಧಾರ್ಮಿಕ ಚಟುವಟಿಕೆ ನಡೆಯಲಿದೆ.
