ಉದಯವಾಹಿನಿ, ಚಿತ್ರದುರ್ಗ: “ಮಕ್ಕಳು ನಿರಂತರವಾಗಿ ಎದುರಿಸುತ್ತಿರುವ ಅನೇಕ ಗೊಂದಲಗಳನ್ನು ಮತ್ತು ದೈನಂದಿನ ಮಾನ
ಸಿಕ ಒತ್ತಡಗಳನ್ನು ಎದುರಿಸುತ್ತಾರೆ. ಕ್ರೀಡೆಗಳು ಮತ್ತು ಆಟಗಳು ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗವಾಗಿದೆ, ಹಾಗೆಯೇ ಯೋಗವು ಮಕ್ಕಳ ಮನಸ್ಸನ್ನು ಶಾಂತವಾಗಿರಿಸಲು ಮತ್ತು ಒತ್ತಡದ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಅಥವಾ ಪ್ರತಿಕ್ರಿಯಿಸಬೇಕು ಎಂಬುದನ್ನು ಕಲಿಸುತ್ತದೆ. ಜೊತೆಗೆ, ಇದು ಖುಷಿಯನ್ನೂ ನೀಡುತ್ತದೆ.” ಎಂದು ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ತಿಳಿಸಿದ್ದಾರೆ.
ಅವರು ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಆರೋಗ್ಯ ಮತ್ತು ಕ್ಷೇಮ ಕೇಂದ್ರ,ಆಯುರ್ವೇದ ಚಿಕಿತ್ಸಾಲಯ ಜೆ.ಎನ್.ಕೋಟೆ ವತಿಯಿಂದ ಇಂದು ತಾಲ್ಲೂಕಿನ ನರೇನಹಾಳ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗಾಗಿ ಆಯೋಜಿಸಿದ್ದ ಉಚಿತ ಯೋಗ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು.
ಯೋಗವು ಎಲ್ಲಾ ವಯಸ್ಸಿನ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ಕೊಲಂಬಿಯ ವಿಶ್ವವಿದ್ಯಾಲಯದ ಒಂದು ಅಧ್ಯಯನದ ಪ್ರಕಾರ 6 ರಿಂದ 11 ವರ್ಷ ವಯಸ್ಸಿನ ಯೋಗ ಅಭ್ಯಾಸ ಮಾಡುತ್ತಿರುವ 90% ಕ್ಕಿಂತ ಹೆಚ್ಚು ಮಕ್ಕಳು ತಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಯೋಗದಿಂದ ಸುಧಾರಿಸಿಕೊಂಡಿದ್ದಾರೆ ಎಂದು ಕಂಡುಹಿಡಿದಿದೆ. ಮಕ್ಕಳ ಏಕಾಗ್ರತೆ, ದೈಹಿಕ ಚಟುವಟಿಕೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಮೆದುಳಿನಲ್ಲಿ ಸೃಜಿಸುವ ಡೋಪಮೈನ್ ಎಂದು ಕರೆಯಲಾಗುವ ರಸಾಯನಿಕವನ್ನು ಯೋಗವು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ಜನಿಸಿದ ಯೋಗದ ಪ್ರಚಾರಕ್ಕಾಗಿ ಸರ್ಕಾರವು ಸಾಕಷ್ಟು ಶ್ರಮ ವಹಿಸುತ್ತಿದೆ ಇದಕ್ಕೆ ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ” ಎಂದು ಅಭಿಪ್ರಾಯ ಪಟ್ಟರು.
ತರಬೇತಿ ಕಾರ್ಯಕ್ರಮದಲ್ಲಿ ದೈಹಿಕ ಚಾಲನ ಕ್ರಿಯೆಗಳು, ತಾಡಾಸನ, ವೃಕ್ಷಾಸನ, ವಜ್ರಾಸನ, ಸೇರಿದಂತೆ ಬಸ್ತ್ರಿಕ, ಭ್ರಾಹ್ಮರಿ, ಉಧ್ಗೀತ ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸ ಮಾಡಿಸಲಾಯಿತು. ನರೇನಹಾಳ್ ಗ್ರಾಮದ ಶಾಲಾ ಮುಖ್ಯೋಪಾಧ್ಯಾಯ ಹೆಚ್.ಸುಭಾನ್, ಸಹ ಶಿಕ್ಷಕರಾದ ಎ.ನೀಲಮ್ಮ, ಟಿ.ಗೀತಾ, ಪಿ.ನರಸಿಂಹಪ್ಪ, ಗ್ರಾಮದ ಮುಖಂಡರು ಹಾಗೂ ಶಾಲಾ ಮಕ್ಕಳು ತರಬೇತಿ ಪಡೆದರು.
