ಉದಯವಾಹಿನಿ, ಚಿಕ್ಕಮಗಳೂರು: ರಸ್ತೆ ಬದಿ ಮಲಗಿದ್ದ ಗೋವುಗಳನ್ನು ಎಕ್ಸ್‌ಯುವಿ 500 ಕಾರಿನಲ್ಲಿ ತುಂಬಿಕೊಂಡು ಎಸ್ಕೇಪ್ ಆಗುತ್ತಿದ್ದ ಗೋ ಕಳ್ಳರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿರುವ ಘಟನೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪದಿಂದ ಕುದುರೆಗುಂಡಿಯವರೆಗೆ ಸುಮಾರು 10 ಕಿ.ಮೀ ಎರಡು ಕಾರುಗಳು ರೇಸ್‌ನಂತೆ ಅತಿ ವೇಗವಾಗಿ ಸಾಗಿವೆ. ಹಿಂದೂ ಸಂಘಟಕರು ಈ ಚೇಸ್ ಮಾಡಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕೊಪ್ಪ ಪಟ್ಟಣದಿಂದ 10 ಕಿ.ಮೀ ದೂರದ ಕುದುರೆಗುಂಡಿವರೆಗೂ ಚೇಸ್ ಮಾಡಿದರೂ ಸಹ ಕಾರು ಅತೀ ವೇಗವಾಗಿ ಹೋಗುತ್ತಿದ್ದರಿಂದ ಅದನ್ನು ಹಿಡಿಯಲು ಸಾಧ್ಯವಾಗದೆ ಹಿಂದೂ ಸಂಘಟಕರು ವಾಪಸ್ ಬಂದಿದ್ದಾರೆ. ಈ ಕಾರು ತೀರ್ಥಹಳ್ಳಿ ಮಾರ್ಗವಾಗಿ ಹೋಗಿರಬಹುದು ಎಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಶಂಕೆ ವ್ಯಕ್ತಪಡಿಸಿವೆ.
