ಉದಯವಾಹಿನಿ, ಲಕ್ನೋ: ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ ಲಿವ್ ಇನ್ ಪ್ರೇಯಸಿಯನ್ನು ಟ್ಯಾಕ್ಸಿ ಡ್ರೈವರ್ ಶಿರಚ್ಛೇದ ಮಾಡಿ ಹತ್ಯೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ನಡೆದಿದೆ.ಟ್ಯಾಕ್ಸಿ ಡ್ರೈವರ್ ಬಿಲಾಲ್ ಎಂಬಾತ ಲಿವ್ ಇನ್ ಪ್ರೇಯಸಿ ಉಮಾ ಎಂಬಾಕೆಯ ತಲೆ ಕತ್ತರಿಸಿ ಕೊಂದಿದ್ದಾನೆ. 30 ವರ್ಷದ ಉಮಾ ಮತ್ತು ಟ್ಯಾಕ್ಸಿ ಡ್ರೈವರ್ ಬಿಲಾಲ್ ಲಿವಿಂಗ್‌ನಲ್ಲಿದ್ದರು. ಉಮಾ ಸಹಾರನ್‌ಪುರದ ನಿವಾಸಿ ಜಾನಿ ಎಂಬಾತನನ್ನು ಮದುವೆಯಾಗಿ ದಂಪತಿಗೆ 13 ವರ್ಷದ ಮಗನಿದ್ದಾನೆ. ಕಳೆದ ಒಂದೂವರೆ ವರ್ಷದ ಹಿಂದೆ ಉಮಾ ಹಾಗೂ ಜಾನಿ ಬೇರೆ ಬೇರೆಯಾಗಿದ್ದು, ಡಿವೋರ್ಸ್ ಕೂಡ ಆಗಿತ್ತು. ಬಳಿಕ ಉಮಾ ಪತಿ, ಮಗನನ್ನು ಬಿಟ್ಟು ಬಿಲಾಲ್ ಜೊತೆ ಲಿವ್ ಇನ್ ರಿಲೇಷನ್‌ನಲ್ಲಿದ್ದಳು. ಇನ್ನು ಚಾಲಕ ಬಿಲಾಲ್‌ಗೆ ಬೇರೊಂದು ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಉಮಾ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಡಿ.6ರಂದು ಹಿಮಾಚಲ ಪ್ರದೇಶಕ್ಕೆ ಹೋಗೋಣವೆಂದು ಉಮಾಳನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಹೊರಟ ಬಿಲಾಲ್ ಆಕೆಯನ್ನು ಕಾರಿನಲ್ಲೇ ಸಾಯಿಸಿ ಅವಳ ಗುರುತು ಪತ್ತೆಯಾಗಬಾರದೆಂದು ದೇಹದಿಂದ ರುಂಡವನ್ನು ಕತ್ತರಿಸಿ, ದೇಹದ ಮೇಲಿದ್ದ ಬಟ್ಟೆಗಳನ್ನು ಒಂದೆಡೆ ಬಿಸಾಕಿದ್ದಾನೆ. ಇನ್ನು ಮೃತದೇಹವನ್ನು ಚೀಲಕ್ಕೆ ತುಂಬಿ ಹರಿಯಾಣ ಗಡಿಯಲ್ಲಿ ಬಿಸಾಕಿ ತನಗೆ ಏನೂ ಗೊತ್ತಿಲ್ಲವೆಂಬಂತೆ ಬಿಲಾಲ್ ತನ್ನ ಮದುವೆ ಸಿದ್ಧತೆಯಲ್ಲಿದ್ದ.
