ಉದಯವಾಹಿನಿ, ನವದೆಹಲಿ: ಭಾರೀ ಗದ್ದಲದ ನಡುವೆ ಲೋಕಸಭೆಯಲ್ಲಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ, 2025 ಅನ್ನು ಅಂಗೀಕರಿಸಲಾಯಿತು. ಇದರಿಂದ ಕೋಪಗೊಂಡ ವಿಪಕ್ಷ ಸಂಸದರು, ಕೇಂದ್ರ ಸರ್ಕಾರ ರಾಷ್ಟ್ರಪಿತನನ್ನ ಅವಮಾನಿಸಿದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (MGNAREGA) ನಿಬಂಧನೆಗಳನ್ನು ದುರ್ಬಲಗೊಳಿಸಿದೆ ಎಂದು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದವು. ಈ ಆರೋಪಗಳ ನಡುವೆ ಸರ್ಕಾರ ಹೊಸ ಮಸೂದೆಯನ್ನ ಸಮರ್ಥಿಸಿಕೊಂಡಿತು.
ಸದನದಲ್ಲಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ , 2009ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾತ್ಮ ಗಾಂಧಿಯವರ ಹೆಸರನ್ನು ನರೇಗಾಗೆ ಸೇರಿಸಲಾಗಿದೆ ಎಂದು ತಿರುಗೇಟು ನೀಡಿದರು. ಆರಂಭದಲ್ಲಿ ಅದು ನರೇಗಾ ಆಗಿತ್ತು, ಮಹಾತ್ಮ ಗಾಂಧಿಯವರ ಹೆಸರನ್ನ ಮಸೂದೆಯಲ್ಲಿ ಸೇರಿಸಿರಲಿಲ್ಲ. 2009ರ ಚುನಾವಣೆ ಹತ್ತಿರ ಬಂದಾಗ ಮತಗಳನ್ನ ಪಡೆಯಲು ಕಾಂಗ್ರೆಸ್‌ ಬಾಪು ಅವರನ್ನ ನೆನಪಿಸಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಎಂಜಿಎನ್‌ಇಜಿಎ ಅನ್ನು ಸರಿಯಾಗಿ ಮತ್ತು ಬಲವಾಗಿ ಜಾರಿಗೆ ತಂದರು ಎಂದು ನಾನು ಹೇಳಲು ಬಯಸುತ್ತೇನೆ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಬಾಪು ಅವರ ಆದರ್ಶಗಳನ್ನ‌ ಹತ್ಯೆ ಮಾಡಿತು. ಆದ್ರೆ ಎನ್‌ಡಿಎ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಸ್ವಚ್ಛ ಭಾರತ ಮಿಷನ್, ಆಯುಷ್ಮಾನ್ ಭಾರತ್ ಅಡಿಯಲ್ಲಿ ಪಕ್ಕಾ ಮನೆಗಳನ್ನ ನಿರ್ಮಿಸಿ ಬಾಪು ಅವರ ಆದರ್ಶಗಳನ್ನ ಪುನರುಜ್ಜೀವನಗೊಳಿಸಿತು ಎಂದು ಹೇಳುತ್ತಾ, ದಿ ಸರ್ಕಾರವು ಜವಾಹರಲಾಲ್ ನೆಹರು ಮತ್ತು ಮಹಾತ್ಮಾ ಗಾಂಧಿಯವರ ಹೆಸರಿನ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನ ಪಟ್ಟಿ ಮಾಡಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಟೀಕೆಗೆ ತಿರುಗೇಟು ನೀಡಿದರು.

Leave a Reply

Your email address will not be published. Required fields are marked *

error: Content is protected !!