ಉದಯವಾಹಿನಿ,ಬೆಂಗಳೂರು: ರಾಜ್ಯ ಸರ್ಕಾರದ 100 ದಿನ ಸಂದರ್ಭಕ್ಕೆ ಪೂರೈಸಬೇಕಾದ ಕೆಲಸಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಕಸ, ಪಾದಚಾರಿ ಮಾರ್ಗದ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ತ್ಯಾಜ್ಯ ರಹಿತ ಸ್ಥಳ (ಬ್ಲ್ಯಾಕ್ ಸ್ಪಾಟ್) ಹಾಗೂ ಪಾದಚಾರಿ ಮಾರ್ಗಗಳ ಸ್ವಚ್ಛತೆಗೆ ಸೂಚಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕಾರ್ಯಗತವಾಗಿದ್ದು, 100 ದಿನದ ಕಾರ್ಯಕ್ರಮದೊಳಗೆ ಹೆಚ್ಚಿನ ಸಾಧನೆ ಮಾಡುವ ಗುರಿ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ತ್ಯಾಜ್ಯ ವಿಲೇವಾರಿಯಲ್ಲಿ ಈಗಾಗಲೇ ಮಾರ್ಷಲ್‌ಗಳು, ಲಿಂಕ್ ವರ್ಕರ್ಸ್, ಕಿರಿಯ ಆರೋಗ್ಯ ಅಧಿಕಾರಿ, ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಈ ಬಗ್ಗೆ ಸೋಮವಾರ ನಡೆದ ವಲಯ ಆಯುಕ್ತರ ಸಭೆಯಲ್ಲೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಮಳೆಗಾಲದ ಸಂದರ್ಭದಲ್ಲಿ ರಸ್ತೆಯಲ್ಲಿ ನೀರು ನಿಲ್ಲದಂತೆ, ಸರಾಗವಾಗಿ ಹರಿಯುವಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 198 ಸ್ಥಳಗಳಲ್ಲಿ ಸಮಸ್ಯೆಯನ್ನು ನಿವಾರಿಸಲು ಶಾಶ್ವತ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿರುವ ಕಡೆ ಪಂಪ್‌ಗಳನ್ನು ಬಳಸಿ ನೀರು ಹೊರಹಾಕಲಾಗುವುದು ಎಂದರು.ಇಂದಿರಾ ಕ್ಯಾಂಟೀನ್‌ಗೆ ಸಂಬಂಧಿಸಿದಂತೆ ಟೆಂಡರ್ ಕರೆಯುವ ಪ್ರಕ್ರಿಯೆಗೆ ಸರ್ಕಾರದಿಂದ ಅನುಮೋದನೆ ಪಡೆಯಬೇಕಿದೆ. ಪ್ರತಿ ವರ್ಷ ಸುಮಾರು ₹80 ಕೋಟಿ ವೆಚ್ಚವಾಗುತ್ತದೆ. ಹೀಗಾಗಿ ಸಚಿವ ಸಂಪುಟದಿಂದ ಸಮ್ಮತಿ ದೊರೆತ ಮೇಲೆ ಟೆಂಡರ್ ಕರೆಯಲಾಗುವುದು ಎಂದು ತುಷಾರ್ ತಿಳಿಸಿದರು.ಬಿಬಿಎಂಪಿ ಶಾಲೆ ಮಕ್ಕಳಿಗೆ ಸ್ವೆಟರ್ ಕೊಡುವುದು ತಡವಾಗಿದೆ. ಕಳೆದ ವರ್ಷಕ್ಕಿಂತಲೂ ಬೇಗ ವಿತರಿಸಲಾಗುವುದು. ಎರಡು ಬಾರಿ ಟೆಂಡರ್ ಕರೆದರೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ 4ಜಿ ವಿನಾಯಿತಿಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲಿಂದ ಸಮ್ಮತಿ ದೊರೆತ ಮೇಲೆ ಲಿಡ್ಕರ್ ಮೂಲಕ ವಿತರಿಸಲಾಗುವುದು ಎಂದು ಹೇಳಿದರು.
