ಉದಯವಾಹಿನಿ,ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೇರಿದ್ದ 41 ಉತ್ತರ ಪತ್ರಿಕೆಗಳನ್ನು ತಿದ್ದುಪಡಿ ಮಾಡಲಾಗಿದ್ದು, ಈ ಅಕ್ರಮ ಎಸಗಿರುವ ಆರೋಪದಡಿ ಗುತ್ತಿಗೆ ನೌಕರ ಟಿ. ಮಂಜುನಾಥ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.’2019ರಿಂದ 2023ರವರೆಗಿನ ಅವಧಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಶ್ರೀನಿವಾಸ್ ದೂರು ನೀಡಿದ್ದಾರೆ. ಪರೀಕ್ಷಾ ಭವನದ ಗುತ್ತಿಗೆ ನೌಕರ ಟಿ. ಮಂಜುನಾಥ್ (45) ಹಾಗೂ ಇತರರ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಜ್ಞಾನಭಾರತಿ ಠಾಣೆ ಪೊಲೀಸ್ ಮೂಲಗಳು ಹೇಳಿವೆ.
‘ವಿಶ್ವವಿದ್ಯಾಲಯದ ಪದವಿ (ಯು.ಜಿ) ಹಾಗೂ ಸ್ನಾತಕೋತ್ತರ (ಪಿ.ಜಿ) ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನಿಂಗ್ ಮಾಡಿ, ನಂತರ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದೇ ಕೆಲಸಕ್ಕೆ ನಿಯೋಜನೆಗೊಂಡಿದ್ದ ನೌಕರ ಮಂಜುನಾಥ್, ಭಾಗಶಃ ಖಾಲಿ ಬಿಡಲಾಗಿದ್ದ 41 ಉತ್ತರ ಪತ್ರಿಕೆಗಳನ್ನು ಅಕ್ರಮವಾಗಿ ಪುನಃ ಬರೆಸಿ ಫಲಿತಾಂಶದ ಮೇಲೆ ಪರಿಣಾಮ ಬೀರುವಂತೆ ಮಾಡಿರುವುದಾಗಿ ದೂರಿನಲ್ಲಿ ಕುಲಸಚಿವರು ಆರೋಪಿಸಿದ್ದಾರೆ’ ಎಂದು ತಿಳಿಸಿವೆ.
