ಉದಯವಾಹಿನಿ , ವಾಷಿಂಗ್ಟನ್: ಇತ್ತೀಚೆಗೆ ನಡೆದ ಐಸಿಸ್ ಉುಗ್ರರ ದಾಳಿಯಲ್ಲಿ ಮೂವರು ಅಮೆರಿಕನ್ನರು ಸಾವನ್ನಪ್ಪಿದ ಹಿನ್ನೆಲೆ ಅಮೆರಿಕ ಪ್ರತೀಕಾರಕ್ಕೆ ಮುಂದಾಗಿದೆ. ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಅಮೆರಿಕದ ಪಡೆಗಳು ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿವೆ. ಈ ಕುರಿತು ಮಾಹಿತಿ ನೀಡಿರುವ ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್ , ʻಐಸಿಸ್ ವಿರುದ್ಧ ಆಪರೇಷನ್ ಹಾಕೈ ಸ್ಟ್ರೈಕ್ʼ ಶುರುವಾಗಿದೆ ಎಂದು ಘೋಷಿಸಿದ್ದಾರೆ.
ಯುದ್ಧವಲ್ಲ, ಪ್ರತೀಕಾರದ ಘೋಷಣೆ: ಹೌದು. ಇದೇ ಡಿಸೆಂಬರ್ 13 ರಂದು ಸಿರಿಯಾದ ಪಾಲ್ಮಿರಾದಲ್ಲಿ ದಾಳಿಗೆ ನೇರ ಪ್ರತಿಕ್ರಿಯೆಯಾಗಿ ಅಮೆರಿಕ ಕಾರ್ಯಾಚರಣೆ ನಡೆಸಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಐಸಿಸ್ ಉಗ್ರರು, ಅವರ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಾಣಗಳನ್ನ ನಿರ್ಮೂಲನೆ ಮಾಡಲು, ಅಮೆರಿಕದ ಪಡೆಗಳು ಸಿರಿಯಾದಲ್ಲಿ ಆಪರೇಷನ್ ʻಹಾಕೈʼ ಆರಂಭಿಸಿವೆ ಎಂದು ಪೀಟ್ ಹೆಗ್ಸೆತ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಲ್ಲದೇ, ಇದು ಯುದ್ಧದ ಆರಂಭವಲ್ಲ – ಪ್ರತೀಕಾರದ ಘೋಷಣೆ ಅಂತ ಬರೆದುಕೊಂಡಿದ್ದಾರೆ. ಅಮೆರಿಕನ್ನರನ್ನ ಗುರಿಯಾಗಿಸಿದ್ರೆ, ನೀವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮನ್ನ ನಾವು ಬೇಟೆಯಾಡುತ್ತದೆ. ಅಮೆರಿಕ ನಿಮ್ಮ ಮೇಲೆ ದಾಳಿ ಮಾಡಿ ನಿಮ್ಮನ್ನು ಕೊಲ್ಲುತ್ತದೆ ಎಂಬ ಭಯದಲ್ಲೇ ನೀವು ಉಳಿದ ಜೀವನ ಕಳೆಯಬೇಕಾಗುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆವು. ಇದೀಗ ಅದೇ ರೀತಿ ಮಾಡುತ್ತೇವೆ. ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ ಅಮೆರಿಕ ತಮ್ಮ ಜನರನ್ನ ರಕ್ಷಿಸಲು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ದಾಳಿಗೆ ಮುಂದಾಗಿದ್ದೇಕೆ?: ಇದೇ ತಿಂಗಳಲ್ಲಿ ಅಮೆರಿಕದ ಪಡೆಗಳ ಮೇಲೆ ಐಸಿಸ್ ಉಗ್ರರ ಗುಂಪು ಭೀಕರ ದಾಳಿ ನಡೆಸಿತ್ತು. ದಾಳಿಯಲ್ಲಿ ಇಬ್ಬರು ಅಮೆರಿಕನ್ ಮತ್ತು ಓರ್ವ ನಾಗರಿಕ ಭಾಷಾಂತರಕಾರ ಸಾವನ್ನಪ್ಪಿದ್ದರು. ಅಲ್ಲದೇ ಇತರ ಮೂವರು ಅಮೆರಿಕನ್ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಇದು ಈ ವರ್ಷ ಅಮೆರಿಕ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ. ಹೀಗಾಗಿ ಅಮೆರಿಕ ಪ್ರತೀಕಾರಕ್ಕೆ ಮುಂದಾಗಿದೆ.
