ಉದಯವಾಹಿನಿ, ಬೆಂಗಳೂರು: ಡಿ.ಕೆ. ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ ಎಂದು ಹೇಳಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಶನಿವಾರ ರಾತ್ರಿ ಭೇಟಿಯಾಗಿದ್ದು ಭಾರಿ ಕುತೂಹಲ ಮೂಡಿಸಿತ್ತು. ಈ ಬಗ್ಗೆ ಇದೀಗ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, “ನನಗೆ ಕಾಂಗ್ರೆಸ್‌ನ ಯಾವುದೇ ನಾಯಕರ ಜತೆ ಭಿನ್ನಾಭಿಪ್ರಾಯಗಳಿಲ್ಲ. ನಾನು, ಸಿಎಂ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ?” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯವರ ಆಪ್ತ ಬಳಗದವರನ್ನು ಭೇಟಿ ಮಾಡಿದ್ದೀರಿ ಎಂಬ ಪ್ರಶ್ನೆಗೆ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, “ಅವರಿಗೆ ಸಿಎಂ ಆಪ್ತರೇನು? ಅವರು ನನಗೂ ಆಪ್ತರೇ. ಅವರು ಯಾರಿಗೆ ಆಪ್ತರಿಲ್ಲ ಹೇಳಿ. ನಾನು ಸಿಎಂ ಆಪ್ತರಲ್ಲವೇ? ರಾಜಣ್ಣ ಅವರು ಜನತಾ ದಳದಲ್ಲಿದ್ದರು. ನಾನು ಕಾಂಗ್ರೆಸ್‌ನವನು. ಅಂದು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು. ಹೋಗಿ ಬೇಕಾದರೆ ಅವರನ್ನೇ ಕೇಳಿ. ಸಿಎಂಗೂ ಇದಕ್ಕೂ ಸಂಬಂಧವೇ ಇಲ್ಲ” ಎಂದರು.
ರಾಜಕೀಯ ಬೆಂಬಲಕ್ಕೆ ಕೆ.ಎನ್. ರಾಜಣ್ಣ ಹಾಗೂ ನೀವು ಭೇಟಿ ಮಾಡಿದ್ದೀರಿ ಎಂದಾಗ, “ನಾವು ಸಹೋದ್ಯೋಗಿಗಳು. ಅವರು ನಮ್ಮ ಜತೆ ಕೆಲಸ ಮಾಡಿರುವವರು. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 16 ವರ್ಷಗಳಿಂದ, ಅವರು ನಮ್ಮ ಪಕ್ಷಕ್ಕೆ ಬಂದ ದಿನದಿಂದ ನನಗೂ ಮುಖ್ಯಮಂತ್ರಿಯವರಿಗೂ ಭಿನ್ನಾಭಿಪ್ರಾಯಗಳು ಏನಾದರೂ ಇದೆಯಾ? ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳು, ವಿರೋಧ ಪಕ್ಷಗಳು ಸೃಷ್ಟಿ ಮಾಡುತ್ತಿವೆ.
