ಉದಯವಾಹಿನಿ, ಬೆಂಗಳೂರು: ರಾಜ್ಯದ ಪ್ರತಿ ಮನೆ ಯಜಮಾನಿಯರಿಗೆ ಹೊಸ ವರ್ಷಕ್ಕೂ ಮುನ್ನವೇ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ಸೋಮವಾರದಿಂದಲೇ ಪ್ರತಿ ಮನೆ ʻಗೃಹಲಕ್ಷ್ಮಿʼಯರ ಖಾತೆಗಳಿಗೆ 1 ಕಂತಿನ ಹಣ ಬಿಡುಗಡೆ ಮಾಡುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಕಂತು ಅಂತ ಹೇಳ್ತೀನಿ. ತಿಂಗಳ ಹೆಸರು ಹೇಳಲ್ಲ. ಈಗಾಗಲೇ ಆರ್ಥಿಕ ಇಲಾಖೆ ಅವರು ನಮಗೆ 24ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. ಸೋಮವಾರದಿಂದ (ಡಿ.22) ಮುಂದಿನ ಶನಿವಾರದ ಒಳಗೆ 24ನೇ ಕಂತಿನ ಹಣ ಬಿಡುಗಡೆ ಆಗಲಿದೆ ಅಂತ ತಿಳಿಸಿದ್ದಾರೆ.
ರಾಜ್ಯದ 1.26 ಕೋಟಿ ಗೃಹಲಕ್ಷ್ಮಿಯರ ಖಾತೆಗೆ ಸೋಮವಾರದಿಂದ 24ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದಿರುವ ಸಚಿವರು, ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಡುಗಡೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. 2 ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ʻಪಬ್ಲಿಕ್ ಟಿವಿʼ ಸತತ ವರದಿ ಮಾಡಿತ್ತು. ಇದರಿಂದ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಸದನದಲ್ಲಿ ಕ್ಷಮೆಯಾಚಿಸಿದ್ದರು. ಈ ಬಗ್ಗೆ ಈಚೆಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಚಿವರ ಮೇಲೆ ಗರಂ ಆಗಿದ್ದರು. ಕೂಡಲೇ ಫೆಬ್ರವರಿ, ಮಾರ್ಚ್ ಕಂತಿನ ಬಾಕಿ ಹಣ ಬಿಡುಗಡೆಗೆ ಸೂಚಿಸಿದ್ದರು. ಆದ್ರೆ 2 ತಿಂಗಳ ಹಣದ ಬಗ್ಗೆ ಸ್ಪಷ್ಟನೆ ನೀಡದ ಸಚಿವರು, 24ನೇ ಕಂತಿನ ಹಣ ಬಿಡುಗಡೆ ಸೋಮವಾರದಿಂದ ಆಗಲಿದೆ ಎಂದು ಹೇಳಿ, ಜಾರಿಕೊಂಡಿದ್ದಾರೆ.
