ಉದಯವಾಹಿನಿ, ಭೋಪಾಲ್: ಯೋಗ ಗುರು ರಾಮ್‌ದೇವ್ ಪತ್ರಕರ್ತರೊಬ್ಬರಿಗೆ ಕುಸ್ತಿ ಪಂದ್ಯಕ್ಕೆ ಸವಾಲು ಹಾಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸದ್ಯ ಪಂದ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, 59 ವರ್ಷದ ರಾಮ್‌ದೇವ್ ವೇದಿಕೆಯಲ್ಲಿದ್ದ ಪತ್ರಕರ್ತರೊಬ್ಬರನ್ನು ಕುಸ್ತಿ ಪಂದ್ಯಕ್ಕೆ ಆಹ್ವಾನಿಸಿದರು. ಅವರ ಎದುರಾಳಿಯು ಅನುಭವಿ ಕುಸ್ತಿಪಟು ಆಗಿದ್ದರು.
ಮಧ್ಯ ಪ್ರದೇಶದ ಇಂದೋರ್‌ನ ಪತ್ರಕರ್ತ ಜೈದೀಪ್ ಕಾರ್ಣಿಕ್, ಕುಸ್ತಿ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೊದಲ್ಲಿ ರಾಮ್‌ದೇವ್ ಜೈದೀಪ್ ಕಾರ್ಣಿಕ್‌ನನ್ನು ಸೋಲಿಸಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ ಕಾರ್ಣಿಕ್ ಅವರನ್ನು ನೆಲಕ್ಕೆ ಬೀಳಿಸುವಲ್ಲಿ ಯಶಸ್ವಿಯಾದರು. ಆದರೆ ಪತ್ರಕರ್ತ ತನ್ನನ್ನು ತಾನು ನಿಯಂತ್ರಿಸಿಕೊಂಡರು. ಪಂದ್ಯವು ಸೌಹಾರ್ದಯುತವಾಗಿ ಕೊನೆಗೊಂಡಿತು. ಇಬ್ಬರು ಆಟಗಾರರು ನೆಲಕ್ಕೆ ಬಿದ್ದು ನಂತರ ನಗುತ್ತಾ ಮೇಲೆದ್ದರು. ಈ ವಿಡಿಯೊವು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯಿತು. ಕೆಲವರು ರಾಮದೇವ್ ಅವರ ದೈಹಿಕ ಸದೃಢತೆಯನ್ನು ಶ್ಲಾಘಿಸಿದರು. ಯಾರು ಏನೇ ಹೇಳಲಿ, ಬಾಬಾ ರಾಮದೇವ್ ಈ ವಯಸ್ಸಿನಲ್ಲೂ ತುಂಬಾ ಫಿಟ್ ಆಗಿದ್ದಾರೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ರಾಮ್‌ದೇವ್ ಪತ್ರಕರ್ತನಿಗೆ ಕುಸ್ತಿ ಬರುವುದಿಲ್ಲ ಎಂದು ಭಾವಿಸಿದಂತೆ ಕಾಣುತ್ತಿದೆ ಎಂದು ಇತರರು ಟೀಕಿಸಿದ್ದಾರೆ.
