ಉದಯವಾಹಿನಿ, ತಿರುವನಂತಪುರಂ: ಕಳ್ಳತನದ ಶಂಕೆಯ ಮೇಲೆ ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಬಳಿ ಸ್ಥಳೀಯ ನಿವಾಸಿಗಳ ಗುಂಪೊಂದು ಛತ್ತೀಸ್‌ಗಢದ 31 ವರ್ಷದ ವಲಸೆ ಕಾರ್ಮಿಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದೆ. ಮೃತನನ್ನು ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದೆ. ಈತ ಕಾಂಜಿಕೋಡ್‌ನಲ್ಲಿ ವಾಸಿಸುತ್ತಿದ್ದ.
ಅಟ್ಟಪ್ಪಲ್ಲಂ ಪೂರ್ವದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರ ಗುಂಪು ನಡೆಸಿದ ಹಲ್ಲೆಯಲ್ಲಿ ಗಂಭೀರ ಗಾಯಗೊಂಡಿದ್ದ ಕಾರ್ಮಿಕನನ್ನು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಭಯಾರ್ ಎಂಬಾತ ಕಳ್ಳತನ ಮಾಡಲು ಈ ಪ್ರದೇಶದ ಹಲವಾರು ಮನೆಗಳಿಗೆ ನುಗ್ಗಿದ್ದ. ಬಾಂಗ್ಲಾದೇಶದವನಿರಬೇಕೆಂದು ಕೆಲವರು ಹಿಡಿದು ಥಳಿಸಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಯಾರ್ ನಾಲ್ಕು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಬಂದಿದ್ದ. ಉದ್ಯೋಗ ಸಿಗದ ಕಾರಣ ಮನೆಗೆ ಮರಳಲು ಯೋಜಿಸಿದ್ದ. ಆತ ಭೇಟಿ ನೀಡಿದ್ದ ಪ್ರದೇಶಕ್ಕೆ ಹೊಸಬ. ಸ್ಥಳಗಳ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ದಾರಿ ತಪ್ಪಿದ್ದ. ಭಯಾರ್ ಯಾವುದೇ ಕ್ರಿಮಿನಲ್ ಹಿನ್ನೆಲೆಯವನಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!