ಉದಯವಾಹಿನಿ, ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ರಾಜಧಾನಿಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ, ಇನ್ನೂ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜೋಹಾನ್ಸ್‌ಬರ್ಗ್‌ನಿಂದ ಸುಮಾರು 40 ಕಿಮೀ ದೂರದಲ್ಲಿರುವ ಬೆಕರ್ಸ್‌ಡಾಲ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಯಾವುದೇ ಸುಳಿವಿಲ್ಲದಂತೆ ಮದ್ಯದಂಗಡಿಗೆ ನುಗ್ಗಿದ ಬಂದೂಕುಧಾರಿಗಳು ಏಕಾಏಕಿ ಜನಸಮೂಹದ ಮೇಲೆ ಗುಂಡು ಹಾರಿಸಿ, ಎಸ್ಕೇಪ್ ಆಗಿದ್ದಾರೆ.
ಘಟನೆ ಬಳಿಕ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಗಾಯಾಳುಗಳನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ನಂತರ ತನಿಖೆ ಆರಂಭಿಸಿದ್ದು, ಈವರೆಗೆ ಯಾವುದೇ ಶಂಕಿತರನ್ನ ಗುರುತಿಸಲಾಗಿಲ್ಲ ಎಂದು ಹೇಳಿದ್ದಾರೆ. ಘಟನೆ ಕುರಿತು ಗೌಟೆಂಗ್ ಪ್ರಾಂತ್ಯದ ಪೊಲೀಸ್ ವಕ್ತಾರ ಬ್ರೆಂಡಾ ಮುರಿಡಿಲಿ ಮಾತನಾಡಿ, ಗುಂಡಿನ ದಾಳಿ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಮೃತರ ವಿವರಗಳನ್ನ ಕಲೆಹಾಕಲಾಗುತ್ತಿದೆ. ಜೊತೆಗೆ ದಾಳಿ ನಡೆದ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
