ಉದಯವಾಹಿನಿ , ಬೆಂಗಳೂರು: ಸದ್ದಿಲ್ಲದೇ ಹೊಸ ವರ್ಷಕ್ಕೆ ಮುಷ್ಕರ ನಡೆಸಲು ಸಾರಿಗೆ ಸಿಬ್ಬಂದಿ ಮುಂದಾಗಿದ್ದಾರೆ. ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ಕರಪತ್ರ ವಿತರಣೆಯಾಗಿದ್ದು ಬೇಡಿಕೆ ಈಡೇರದೇ ಇದ್ದರೆ ಮುಷ್ಕರ ಅನಿವಾರ್ಯ ಎಂದು ತಿಳಿಸಲಾಗಿದೆ.ಬೆಳಗಾವಿ ಅಧಿವೇಶನದ ಬಳಿಕ ಸ್ಪಂದಿಸುವ ಬಗ್ಗೆ ಸರ್ಕಾರ ಭರವಸೆ ಕೊಟ್ಟಿದೆ. ಸರ್ಕಾರ ಬೇಡಿಕೆ ಈಡೇರಿಸದೇ ಇದ್ದರೆ ಮುಷ್ಕರಕ್ಕೆ ಸಿದ್ದರಾಗಿ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಪರವಾಗಿ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಜಯದೇವರಾಜೇ ಅರಸ್ ಮಾತನಾಡಿ, 38 ತಿಂಗಳ ಹಿಂಬಾಕಿ ನೀಡಬೇಕು. ಸರ್ಕಾರ ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲದೇ ಇದ್ದರೆ ಜನವರಿ ಮೊದಲ ವಾರದಲ್ಲಿ ಮುಷ್ಕರದ ಬಿಸಿ ಜನರಿಗೆ ತಟ್ಟಲಿದೆ. ಒಂದೇ ಒಂದು ಬಸ್ ಡಿಪೋದಿಂದ ಹೊರಗೆ ಬರುವುದಿಲ್ಲ. ಸರ್ಕಾರಕ್ಕೆ ನೀಡುತ್ತಿರುವ ಕೊನೆಯ ಎಚ್ಚರಿಕೆಯಿದು ಎಂದು ಹೇಳಿದ್ದಾರೆ.
ಪ್ರತಿ 4 ವರ್ಷಗಳಿಗೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ನಡೆಯುತ್ತದೆ. ಈ ಹಿಂದೆ 2012-2016ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2012ರಿಂದ ಜಾರಿಗೆ ಬರುವುದಾಗಿ, 2016-2020ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2016ರಿಂದ ಜಾರಿಗೆ ಬರುವಂತೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖವಾಗಿತ್ತು.
