ಉದಯವಾಹಿನಿ , ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದ ಪ್ರಮುಖ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಎಂಬವನನ್ನು ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ, ಮತ್ತೊಬ್ಬ ವಿದ್ಯಾರ್ಥಿ ನಾಯಕನ ತಲೆಗೆ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ)ಯ ಖುಲ್ನಾ ವಿಭಾಗದ ಮುಖ್ಯಸ್ಥ ಮತ್ತು ಪಕ್ಷದ ಕಾರ್ಮಿಕರ ವಿಭಾಗದ ಕೇಂದ್ರ ಸಂಯೋಜಕ ಮುಹಮ್ಮದ್ ಮೊತಲೆಬ್ ಸಿಕ್ದರ್ ಗಾಯಗೊಂಡ ವಿದ್ಯಾರ್ಥಿ ನಾಯಕ. ಇಂದು ಮುಸುಕುಧಾರಿಗಳು ಸಿಕ್ದರ್ ಅವರ ತಲೆಗೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯ ಉಂಟಾಗಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಹೇಳಿದ್ದಾರೆ.ಆಸ್ಪತ್ರೆಯ ಮೂಲಗಳ ಪ್ರಕಾರ, ಸಿಕ್ದರ್ ತಲೆಯ ಎಡಭಾಗಕ್ಕೆ ಗುಂಡು ಹಾರಿಸಲಾಗಿದೆ.
ಆಸ್ಪತ್ರೆಗೆ ಕರೆತಂದಾಗ ತೀವ್ರ ರಕ್ತಸ್ರಾವವಾಗುತ್ತಿತ್ತು. ತಲೆಯ ಸ್ಕ್ಯಾನ್ ಮಾಡಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.ಎನ್‌ಸಿಪಿ ಪಕ್ಷದ ಜಂಟಿ ಪ್ರಧಾನ ಸಂಯೋಜಕ ಮಹ್ಮದ್ ಮಿತು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಕೆಲವು ನಿಮಿಷಗಳ ಹಿಂದೆ ವಿದ್ಯಾರ್ಥಿ ನಾಯಕ ಮುಹಮ್ಮದ್ ಮೊತಲೆಬ್ ಸಿಕ್ದರ್ ಅವರ ತಲೆಗೆ ಗುಂಡು ಹಾರಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಆತನನ್ನು ಖುಲ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಬರೆದುಕೊಂಡಿದ್ದಾರೆ.ಚುನಾವಣೆ ಸಿದ್ಧತೆ ನಡುವೆ ಗುಂಡಿನ ದಾಳಿ: ಕಳೆದ ವರ್ಷ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಸರ್ಕಾರದ ವಿರುದ್ಧ ನಡೆದ ದಂಗೆಯ ಪ್ರಮುಖ ರೂವಾರಿಗಳಲ್ಲಿ ಒಬ್ಬನಾಗಿದ್ದ ಷರೀಫ್ ಉಸ್ಮಾನ್ ಹಾದಿ ಎಂಬಾತನನ್ನು ಡಿಸೆಂಬರ್ 12ರಂದು ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸುಕುಧಾರಿ ಬಂದೂಕುಧಾರಿಗಳು ಗುಂಡು ಹಾರಿಸಿದ್ದರು. ಸಿಂಗಾಪುರದಲ್ಲಿ ಆತ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದ. ಷರೀಫ್ ಇಂಕ್ವಿಲಾಬ್ ಮಂಚ್ ಪಕ್ಷದ ವಕ್ತಾರನಾಗಿದ್ದ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಚಾರದಲ್ಲಿ ತೊಡಗಿದ್ದ.
