ಉದಯವಾಹಿನಿ ,  ಇಂಡೋನೇಷ್ಯಾ : ಮಧ್ಯರಾತ್ರಿ 34 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಭೀಕರ ಅಪಘಾತಕ್ಕೀಡಾಗಿದ್ದು, 16 ಮಂದಿ ಸಾವನ್ನಪ್ಪಿರುವ ದುರ್ಘಟನೆ ಜಾವಾ ದ್ವೀಪ ಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಸ್ ಟೋಲ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕಕ್ಕೆ ಉರುಳಿಬಿದ್ದು ಈ ಅವಘಡ ಸಂಭವಿಸಿದೆ ಎಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಂಸ್ಥೆಯ ಮುಖ್ಯಸ್ಥ ಬುಡಿಯೊನೊ ಮಾಹಿತಿ ನೀಡಿದ್ದಾರೆ.

ಬಸ್​ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಇಲ್ಲಿನ ಪ್ರಾಚೀನ ನಗರವಾದ ಯೋಗಕರ್ತಾ ಕಡೆ ತೆರಳುತ್ತಿದ್ದ ವೇಳೆ ರಸ್ತೆಯ ನಿರ್ಗಮನ ತಿರುವಿನಲ್ಲಿ ಇರುವ ಜಾವಾದ ಸೆಮಾರಾಂಗ್​ ಕ್ರಾಪ್ಯಾಕ್​ ಕೇಂದ್ರೀಯ ಟೋಲ್ ಬಳಿ ಅಪಘಾತಕ್ಕೀಡಾಗಿದೆ ಎಂದು ಅವರು ಹೇಳಿದರು. ಡಿಕ್ಕಿಯ ರಭಸಕ್ಕೆ ಬಸ್​ನಲ್ಲಿದ್ದ ಬಹುತೇಕ ಪ್ರಯಾಣಿಕರೆಲ್ಲರೂ ಹೊರಗೆ ತೂರಿಬಿದ್ದಿದ್ದಾರೆ. ಈ ವೇಳೆ ಅವರು ಕಾಂಕ್ರೀಟ್​ ತಡೆಗೋಡೆ ಹಾಗೂ ಬಸ್​ ಮಧ್ಯೆ ಸಿಲುಕಿದ್ದರು ಎಂದು ಬುಡಿಯೊನೊ ತಿಳಿಸಿದರು. ​

ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 40 ನಿಮಿಷದಲ್ಲಿ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದರು. ಅಪಘಾತದಿಂದ ಸ್ಥಳದಲ್ಲೇ ಆರು ಜನರು ಸಾವನ್ನಪ್ಪಿದರೆ, 10 ಜನರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಉಸಿರು ಚೆಲ್ಲಿದ್ದಾರೆ. ಉಳಿದವರು 18 ಪ್ರಯಾಣಿಕರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಪೈಕಿ 13 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದರು.

ಅಲ್ಲಿನ ಸ್ಥಳೀಯ ಟಿವಿ ವರದಿಗಳ ಪ್ರಕಾರ, ಯೆಲ್ಲೋ ಬಸ್ ರಸ್ತೆ ಬದಿ ಉರುಳಿಬೀಳುತ್ತಿದ್ದಂತೆ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡಗಳ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರು ಅಪಘಾತದಲ್ಲಿನ ಸಂತ್ರಸ್ತರನ್ನು ರಕ್ಷಿಸಲು ಪ್ರಯತ್ನಿಸಿದರು. ಆಂಬ್ಯುಲೆನ್ಸ್​ ಅನ್ನು ಕರೆಯಿಸಿ ಗಾಯಾಳುಗಳು ಮತ್ತು ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದರು.

 

 

Leave a Reply

Your email address will not be published. Required fields are marked *

error: Content is protected !!