ಉದಯವಾಹಿನಿ , ಶ್ರೀನಗರ : ಪಹಲ್ಗಾಮ್ ದಾಳಿ, ಇದಕ್ಕೆ ಪ್ರತಿಯಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮತ್ತು ನೌಗಮ್ ಸ್ಫೋಟ ಜಮ್ಮು ಕಾಶ್ಮೀರದಲ್ಲಿ ಶಾಂತಿಯನ್ನು ಸ್ವಲ್ಪ ಸಮಯದವರೆಗೆ ಭಂಗಗೊಳಿಸಿದರೂ, 2025ನೇ ವರ್ಷ ದಶಕದಲ್ಲಿಯೇ ಅತ್ಯಂತ ಕಡಿಮೆ ಹಿಂಸಾತ್ಮಕ ವರ್ಷವಾಗಿ ಕೊನೆಗೊಂಡಿದೆ.ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಗಳಲ್ಲಿ 118 ಜನರು ಸಾವನ್ನಪ್ಪಿದ್ದಾರೆ. ಡಿಸೆಂಬರ್‌ನಲ್ಲಿ ಇಲ್ಲಿಯವರೆಗೆ ಒಂದು ಹತ್ಯೆ ವರದಿಯಾಗಿದೆ.
ಕೊಲ್ಲಲ್ಪಟ್ಟವರಲ್ಲಿ 44 ಭಯೋತ್ಪಾದಕರು, 20 ಭದ್ರತಾ ಸಿಬ್ಬಂದಿ, 53 ನಾಗರಿಕರು ಮತ್ತು ಒಬ್ಬ ಅಪರಿಚಿತ ವ್ಯಕ್ತಿ ಸೇರಿದ್ದಾರೆ. ತಲಾ ಎರಡು ಹತ್ಯೆಗಳೊಂದಿಗೆ ಅಕ್ಟೋಬರ್ ಮತ್ತು ನವೆಂಬರ್‌ ಅತ್ಯಂತ ಶಾಂತ ತಿಂಗಳುಗಳಾಗಿದ್ದರೆ, ಮೇ ಮತ್ತು ಏಪ್ರಿಲ್ ತಿಂಗಳುಗಳು ಕ್ರಮವಾಗಿ 43 ಮತ್ತು 37 ಹತ್ಯೆಗಳೊಂದಿಗೆ ಅತ್ಯಂತ ಹಿಂಸಾತ್ಮಕ ತಿಂಗಳುಗಳಾಗಿವೆ.

ಏಪ್ರಿಲ್ 22ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡು ಹಾರಿಸಿ ಸ್ಥಳೀಯ ಕುದುರೆ ಸವಾರ ಸೇರಿದಂತೆ 25 ಮಂದಿ ಅಮಾಯಕರನ್ನು ಕೊಂದು ಹಾಕಿದ್ದರು. ಈ ದಾಳಿ ದೇಶಾದ್ಯಂತ ಭಾರೀ ಆಘಾತದ ಅಲೆಗಳನ್ನು ಉಂಟುಮಾಡಿತು. ವ್ಯಾಪಕ ಖಂಡನೆ ವ್ಯಕ್ತವಾಯಿತು. ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿತು.
ನಂತರದ ವಾರಗಳಲ್ಲಿ ವಿದೇಶಿ ಮತ್ತು ದೇಶೀಯ ಸಂದರ್ಶಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಗಳನ್ನು ರದ್ದುಗೊಳಿಸಲು ಪ್ರಾರಂಭಿಸಿದರು. ಭದ್ರತಾ ವ್ಯವಸ್ಥೆಗಳನ್ನು ಪರಿಷ್ಕರಿಸಲು ಆಡಳಿತ 48 ಪ್ರವಾಸಿ ತಾಣಗಳನ್ನು ಮುಚ್ಚಿತು. 2020ರ ನಂತರ ಏಪ್ರಿಲ್ ಕಾಶ್ಮೀರದಲ್ಲಿ ಅತ್ಯಂತ ಮಾರಕ ತಿಂಗಳಾಯಿತು. ನಾಗರಿಕರ ಸಾವುಗಳು 15 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿವೆ ಎಂದು ಈಟಿವಿ ಭಾರತ್‌ಗೆ ಲಭ್ಯವಾದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!